ಬೆಂಗಳೂರು: ಬಿಜೆಪಿ ಶಾಸಕ ಲಿಂಬಾವಳಿ ಅವರ ಹೆಸರು ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಈ ಪ್ರಕರಣದಲ್ಲಿ ಶಾಸಕರ ಹೆಸರು ಪ್ರಸ್ತಾಪವಾಗಿದ್ದು, ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು. ತನಿಖೆ ಆಗಲಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಿ, ನಾವು ಈ ವಿಚಾರದಲ್ಲಿ ಅನಗತ್ಯವಾಗಿ, ಯಾರ ಹೆಸರನ್ನೂ ಹೇಳುವುದಿಲ್ಲ. ಜನಸಾಮಾನ್ಯರು ಈ ಪ್ರಕರಣವನ್ನು ನೋಡುತ್ತಿದ್ದು, ಸರ್ಕಾರ ಧೃಡ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕರ ದುರ್ವರ್ತನೆಗಳಿಂದ ಅನೇಕ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕೊನೆ ಹಾಡಬೇಕು. ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು. ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ, ಶಿವಕುಮಾರ್ ಬೇರೆಯಲ್ಲ. ಆದರೆ ಈ ಸರ್ಕಾರ ಲಂಚ, ಮಂಚ, ಇಂತಹ ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ರಕ್ಷಣೆ ಮಾಡಿಕೊಂಡು ಬಂದಿದೆ. ಜನ ಇನ್ನು 60 ದಿನ ಈ ಸರ್ಕಾರದ ಅನ್ಯಾಯವನ್ನು ತಡೆದುಕೊಳ್ಳಬೇಕಿದೆ’ ಎಂದರು.
ಈ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಲಿಂಬಾವಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಮೃತ ವ್ಯಕ್ತಿ ಅವರ ಕಡೆ ಹುಡುಗ. ಆತನ ಮರಣಪತ್ರವನ್ನು ನಾವು ಬರೆದಿದ್ದೆವಾ ಅಥವಾ ಬರೆಸಿದ್ದೆವಾ? ನಾವು ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಯಾರು ಭಾಗಿಯಾಗಿದ್ದಾರೆ ಎಂದು ಹೇಳಲಿ. ಆತ್ಮಹತ್ಯೆ ಪತ್ರ ಬರೆದಿರುವುದರಿಂದ ಎಲ್ಲರೂ ತನಿಖೆಗೆ ಒಳಗಾಗಿ ಶಿಕ್ಷೆಗೆ ಒಳಗಾಗಬೇಕು’ ಎಂದು ಡಿಕೆಶಿ ಹೇಳಿದರು.
























































