ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಆಪ್ತನೆನ್ನಲಾದ ಪ್ರದೀಪ್ ಸಾವಿಗೆ 40% ಸರ್ಕಾರವೇ ಕಾರಣ ಎಂದು ಆರೋಪಿಸಿರುವ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೀವಾಲ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅರವಿಂದ್ ಲಿಂಬಾವಳಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಮೃತ ಪ್ರದೀಪ್ ಅವರ ನಿವಾಸಕ್ಕೆ ಸುರ್ಜೆವಾಲ ಹಾಗೂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರ್ಜೆವಾಲಾ, ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ. ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು. 40% ಕಮಿಷನ್‌ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿದೆ ಎಂದು ಸುರ್ಜೀವಾಲ ದೂರಿದರು.
ಸಂತೋಷ್ ಪಾಟೀಲ್ ಕೂಡ ಬಿಜೆಪಿ ಲೀಡರ್ ಆಗಿದ್ದ ಅವನಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು ಎಂದು ಬೊಟ್ಟು ಮಾಡಿದ ಅವರು, ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕ್ತಿದ್ದಾರೆ?.ಪ್ರದೀಪ್ ಸಾವು ಆತ್ಮ ಹತ್ಯೆ ಅಲ್ಲ, ಅದೊಂದು ಕೊಲೆ ಎಂದು ಆರೋಪಿಸಿದರು.
ಇವರ ಮಗಳ, ಹೆಂಡತಿಯ ಕಣ್ಣೀರು ಒರೆಸುವುದಕೆ ಸರ್ಕಾರದ ಕೈಲಿ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗ್ತಾ ಇದೆ. ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು.ಅವರನ್ನು ಬಂಧಿಸಬೇಕು ಕಂಬಿ ಹಿಂದೆ ಕಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ, ಸಿದ್ದರಾಮಯ್ಯ, ಇದು ನಡೆಯಬಾರದ ಘಟನೆ. ಹಣಕಾಸಿನ ವ್ಯವಹಾರದಲ್ಲಿ ಇಂತಹ ಘಟನೆ ಆಗಿದೆ ಎಂದು ದೂರಿದರು.
ಪ್ರದೀಪ್ ಪತ್ನಿಯವರು ಪ್ರದೀಪ್ ಗೆ ನ್ಯಾಯ ಕೊಡಿಸಿ ಅಂತ ಕೇಳಿದ್ದಾರೆ.1.5 ಕೋಟಿ ನಾವು ಇನ್ವೆಸ್ಟ್ ಮಾಡಿದ್ವಿ. ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಅನ್ನೋದು ಇವರ ವಾದವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಲಿಂಬಾವಳಿ ಈ ಭಾಗದ ಶಾಸಕರು. ಸೆಟ್ಲಮೆಂಟ್‌ಗೆ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ 6 ಜನರ ಹೆಸರು ಇದೆ. ಲಿಂಬಾವಳಿ ಹೆಸರು ಇದೆ. ಈಗಾಗಲೇ FIR ಆಗಿದೆ. ಪೊಲೀಸರು ಹಣವನ್ನು ವಾಪಸ್ ಕೊಡಿಸಬೇಕು. ಕೂಡಲೇ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ, ಸಾವಿಗೆ ಕಾರಣವಾದರ ಮೇಲೆ ಕಾನೂನು ಕ್ರಮ ಆಗಬೇಕು. ಶಿಕ್ಷೆ ಆಗುವಂತೆ ಮಾಡಬೇಕು. MLA ಇರಲಿ ಯಾರೇ ಇರಲಿ. ತಪ್ಪು ಯಾರೇ ಮಾಡಿದ್ರು ತಪ್ಪು. ಕಾನೂನು ಪ್ರಕಾರ ಕ್ರಮ ಆಗಬೇಕು. MLA ಅವರನ್ನು ಅರೆಸ್ಟ್ ಮಾಡಬೇಕು. ಇಲ್ಲದೆ ಹೋದ್ರೆ ಸಾಕ್ಷಿ ನಾಶ ಮಾಡಬಹುದು ಎಂದರು.
ಪೊಲೀಸರು ಅವರ ಮನೆಯವರ ಮೊಬೈಲ್ ಕೇಳ್ತಿದ್ದಾರೆ ಅಂತೆ. ಹೀಗೆಲ್ಲ ಮಾಡೋದು ಸರಿಯಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂತ ಹೇಳಿದ್ರು.3 ತಿಂಗಳಲ್ಲಿ ಬಿ ರಿಪೋರ್ಟ್ ಕೊಟ್ರು. ಇದೇ ಪರಿಸ್ಥಿತಿ ಈ ಕೇಸ್ ನಲ್ಲಿ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಸರಕಾರದಲ್ಲಿ ಅನೇಕ ಜನ ಸಾಯೋದು, ದಯಾ ಮರಣ ಕೋರೋದು ಆಗ್ತಿದೆ. ಇದಕ್ಕೆ ಭ್ರಷ್ಟಾಚಾರ ಕಾರಣ. ಭ್ರಷ್ಟಾಚಾರದ ವಿರುದ್ದ ಕ್ರಮ ಆಗದೆ ಇರೋದಕ್ಕೆ ಹೀಗೆ ಅಗ್ತಿದೆ. ಈ ಕೇಸ್‌ನಲ್ಲಿ ಪ್ರದೀಪ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.





















































