ಮಂಗಳೂರು: ಆಸ್ತಿಕರ ಪಾಲಿಗೆ ಇಂದು ವಿಶೇಷ ದಿನ. ವೈಕುಂಠ ಏಕಾದಶಿ ದಿನವಾದ ಇಂದು ಮಂಗಳೂರಿನಲ್ಲಿರುವ ಆಸ್ತಿಕರ ಪಾಲಿಗೆ ಎಂದಿಲ್ಲದ ಸುದಿನ. ಧರೆಯಲ್ಲೊಂದು ಸ್ವರ್ಗವೇ ಅವತರಿಸಿದಂತಿತ್ತು ಕಾರ್‌ಸ್ಟ್ರೀಟ್ ವೆಂಟೇಶ್ವರನ ಸನ್ನಿಧಿ
ವೆಂಕಟರಮಣ ದೇವಳ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ದೀಪಾಲಂಕಾರದಿಂದ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿತ್ತು. ಅಪರೂಪದಲ್ಲಿ ಅಪರೂಪವೆಂಬಂತೆ ಸಿಂಗಾರಗೊಂಡು ಭಕ್ತಕೋಟಿಯ ಚಿತ್ತ ಸೆಳೆಯುತ್ತಿತ್ತು.
ಮಂಗಳೂರು ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ “ವೈಕುಂಠ ಏಕಾದಶಿ” ಪ್ರಯುಕ್ತ ವಿಶೇಷ ಮಹೋತ್ಸವವೇ ಜರುಗಿತು. ವೈಕುಂಟನ ಕೈಂಕರ್ಯಕ್ಕಾಗಿ ಶ್ರೀದೇವಳದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗಿತ್ತು.
ಆಸ್ತಿಕರ ಪಾಲಿಗೆ ವೈಕುಂಠ ಏಕಾದಶಿ ಎಂಬುದು ಪರಮ ಪೂಜನೀಯ ಸನ್ನಿವೇಶದ ಸುದಿನ. ಹಾಗಾಗಿಯೇ ಭಕ್ತಸಾಗರ ವೆಂಕಟೇಶ್ವರನ ಸನ್ನಿಧಿಯತ್ತ ಹರಿದುಬಂದಿತ್ತು. ದೇವಾಲಯದ ಅಭೂತಪೂರ್ವ ಅಲಂಕಾರ ಕಂಡು ಭಕ್ತರು ಪುಳಕಿತರಾದರು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀ ದೇವಳವು ದಿನಪೂರ್ತಿ ತೆರೆದಿದ್ದು ದಿನವಿಡೀ ಶ್ರೀದೇವರ ದರ್ಶನ ಪಡೆಯಲು ಭಕ್ತಸಮೂಹಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಹಸ್ರರಾರು ಭಜಕರು ಶ್ರೀದೇವರ ದರ್ಶನ ಪಡೆದು ಪುನೀತರಾದರು.

ಶ್ರೀದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಕೆ .ಗಣೇಶ್ ಕಾಮತ್, ಸತೀಶ್ ಪ್ರಭು ಮೊದಲಾದ ಪ್ರಮುಖರ ಉಪಸ್ಥಿತಿಯಲ್ಲಿ ಕೈಂಕರ್ಯದ ವಿಧಿವಿದಾನಗಳು ನೆರವೇರಿದವು.






















































