ಕ್ರೈಸ್ತ ಧರ್ಮಗುರುಗಳಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಶಾಸಕ ಸಿ.ಟಿ.ರವಿ..ಜಾತಿ, ಮತ ಬೇಧವಿಲ್ಲದೆ ಜನ ಸೇವೆ ಮಾಡುತ್ತಿರುವ ಜನಪ್ರತಿನಿಧಿ ಶಾಸಕ ಸಿ.ಟಿ.ರವಿ ಎಂದ ಬಿಷಪ್ ಡಾ.ಅಂತೋಣಿಸ್ವಾಮಿ..
ಚಿಕ್ಕಮಗಳೂರು : ‘ನಾನು ಜಿಲ್ಲೆಗೆ ಬಂದು ೧೪ ವರ್ಷಗಳಾಗಿವೆ ಅಂದಿನಿಂದಲೂ ಶಾಸಕ ಸಿ.ಟಿ.ರವಿಯವರನ್ನು ಗಮನಿಸಿದ್ದೇನೆ ಅವರು ಜಿಲ್ಲೆಯ ಅಭಿವೃದ್ದಿ ಮತ್ತು ಯಾವುದೇ ಜಾತಿ, ಮತ ಬೇಧಭಾವವಿಲ್ಲದೆ ಜನರಿಗೆ ಮಾಡುತ್ತಿರುವ ಸೇವೆ ದೊಡ್ಡದು’ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ.ಅಂತೋಣಿಸ್ವಾಮಿ ಹೇಳಿದರು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಶಾಸಕ ಸಿ.ಟಿ.ರವಿ ಶನಿವಾರ ಜ್ಯೋತಿ ನಗರದ ಬಿಷಪ್ ಹೌಸ್ಗೆ ತೆರಳಿ ಡಾ.ಅಂತೋಣಿಸ್ವಾಮಿ ಯವರಿಗೆ ಕ್ರಿಸ್ಮಸ್ ಶುಭಕೋರಿದಾಗ ಆಶೀರ್ವದಿಸಿ ಸಂದೇಶ ನೀಡಿದರು. ಏಸುಸ್ವಾಮಿ ಬಂದಿದ್ದೇ ಪ್ರೀತಿ ಮತ್ತು ಸೇವೆಗೆ. ನಮ್ಮ ಮನುಕುಲಕ್ಕೆ ಪ್ರೀತಿ ತೋರ್ಪಡಿಸಿದ್ದಾರೆ, ಪ್ರೀತಿ ಇರುವಲ್ಲಿ ಸೇವೆ ಕೂಡ ಇರಬೇಕು ಹಾಗಾಗಿ ನಾನು ಸೇವೆ ಮಾಡಿಸಿಕೊಳ್ಳಲು ಬಂದಿಲ್ಲ ಸೇವೆ ಮಾಡಲು ಬಂದಿದ್ದೇನೆ ಎಂದು ಏಸುಸ್ವಾಮಿ ಹೇಳಿದ್ದರು ಅದೇರೀತಿ ಶಾಸಕ ಸಿ.ಟಿ.ರವಿಯವರು ಕೂಡ ತಮ್ಮ ಜೀವನವನ್ನೆ ಜನರ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ ಏಸುಸ್ವಾಮಿಯು ಆಶೀರ್ವಾದ ಅವರ ಮೇಲೆ ದಯಪಾಲಿಸಲಿ ಕ್ಷೇತ್ರದ ಅಭಿವೃದ್ದಿಗೆ ಅವರ ಮನಸ್ಸಿನಲ್ಲಿ ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿ ಎಂದು ಧರ್ಮಗುರುಗಳು ಆಶಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿ ಹೆಚ್ಚಿದ್ದರೂ ಎಲ್ಲಾ ಕಾರ್ಯಕರ್ತರು ಅವರ ಬೆನ್ನೆಲುಭಾಗಿ ನಿಂತು ಸ್ಪಂದಿಸುತ್ತಿದ್ದೀರ. ಅದರ ನಡುವೆಯೂ ಪ್ರತಿವರ್ಷ ದೇವಾಲಯಕ್ಕೆ ಬಂದು ನಮ್ಮೆಲ್ಲರೊಂದಿಗೆ ಕ್ರಿಸ್ತ ಜಯಂತಿ ಸಂಭ್ರಮ ಹಂಚಿಕೊಂಡಿದ್ದಾರೆ ಅವರಿಗೆ ಋಣಿಯಾಗಿದ್ದೇವೆ. ಶಾಸಕ ರವಿಯವರ ಎರಡನೆ ಪುತ್ರ ಕೂಡ ಹುಟ್ಟಿರುವುದೆ ಕ್ರಿಸ್ಮಸ್ ಹಬ್ಬದ ದಿನದಂದು. ಅವರೂ ಕೂಡ ಉತ್ತಮ ವಿದ್ಯಾವಂತ, ಬುದ್ದಿವಂತರಾಗಲು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಪ್ರತಿವರ್ಷದಂತೆ ಬಿಷಪ್ ಹೌಸ್ಗೆ ಬಂದು ಗುರುಗಳಿಗೆ ಕ್ರಿಸ್ಮಸ್ ಶುಭಾಷಯ ಸಲ್ಲಿಸಿ ಅವರ ಆಶೀರ್ವಾದ ಪಡೆಯುವಂತದ್ದು ನಿರಂತರವಾಗಿ ರೂಢಿಸಿಕೊಂಡಿದ್ದೇನೆ. ಗುರುಗಳು ಸಹ ನಮ್ಮನ್ನೆಲ್ಲಾ ಆದರಪೂರ್ವಕವಾಗಿ ಸ್ವಾಗತಿಸಿ ಪ್ರೀತಿಯಿಂದ ಕಂಡು ಮನಃಪೂರ್ವಕವಾಗಿ ಆಶೀರ್ವಾದ ಮಾಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಎಲ್ಲಾ ಕ್ರೈಸ್ತ ಭಾಂದವರಿಗೂ ಹಬ್ಬದ ಶುಭಾಷಯಗಳು. ಎಲ್ಲರ ಬದುಕಿನಲ್ಲಿ ಅವರ ಸದಿಚ್ಚೆಗಳೆಲ್ಲವೂ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕ್ರೈಸ್ತ ಸಮುದಾಯದವರ ಸ್ಮಶಾನಕ್ಕೆ ಜಾಗದ ಸಮಸ್ಯೆ ಇದೆ. ಅದನ್ನು ಬಗೆಹರಿಸುವಂತೆ ಕೋರಿ ಸಮುದಾಯದವರು ಶಾಸಕರ ಗಮನಕ್ಕೆ ತಂದಾಗ ಕೂಡಲೆ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿಯವರಿಗೆ ದೂರವಾಣಿ ಮೂಲಕ ಮಾಹಿತಿ ಪಡೆದರು. ಕ್ರೈಸ್ತ ಸಮುದಾಯದವರ ಸ್ಮಶಾನಕ್ಕೆ ಹಿಂದೆಯೇ ಜಾಗ ನೀಡಲಾಗಿದೆ. ಡೀಮ್ಡ್ ಫಾರೆಸ್ಟಗೆ ಸಂಬಂದ ಪಟ್ಟಂತೆ ಸಣ್ಣ ಸಮಸ್ಯೆ ಇತ್ತು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂದ ಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುದಾಗ ಹೇಳಿದಾಗ ಶಾಸಕರಿಗೆ ಅಭಿನಂದಿಸಿದರು.
ನಗರದ ವಿವಿಧ ಕ್ರೈಸ್ತ ದೇವಾಲಯಗಳಿಗೆ ತೆರಳಿ ಧರ್ಮ ಗುರುಗಳಿಗೆ ಫಲಪುಷ್ಪ ಸಮರ್ಪಿಸಿ ಕ್ರಿಸ್ಮಸ್ ಶುಭಾಷಯ ಕೋರಿದರು. ನಂತರ ಬೇಲೂರು ರಸ್ತೆ ಸಂತ ಆಂದ್ರೆಯನ ದೇವಾಲಯ , ಸಂತ ಜೋಸೆಫರ ಪ್ರಧಾನ ದೇವಾಲಯ, ವಿಜಯಪುರ ಪವಿತ್ರ ಕುಟುಂಬ ದೇವಾಲಯಗಳಲ್ಲಿ ಪ್ರಧಾನ, ಸಹಾಯಕ ಗುರುಗಳು ಹಾಗೂ ಸಮುದಾಯದವರಿಗೆ ಶುಭಕೋರಿದರು. ಹೋಲಿಕ್ರಾಸ್ ಆಸ್ಪತ್ರೆಗೆ ತೆರಳಿ ಕ್ರೈಸ್ತ ಮಿಷನರಿಗಳು, ರೋಗಿಗಳೊಂದಿಗೆ ಭಾಗಿಯಾಗಿ ಕೇಕ್ ಕತ್ತರಿಸಿ ಪರಸ್ಪರ ಸಂಭ್ರಮಿಸಿದರು.
ಪ್ರಧಾನ ಗುರುಗಳಾದ ಅಂತೋಣಿ ಪಿಂಟೋ, ಫಾ.ಫ್ರಾನ್ಸಿಸ್ ರಸ್ಕಿನೊ, ಫಾ.ವಿನೀತ್, ಸಹಾಯಕ ಗುರುಗಳಾದ ಫಾ.ವೆಲಾಂಗನಿ ಟೋನಿ, ಫಾ.ಲಿನೂ ರಾಬರ್ಟ್, ಫಾ.ವಿನಯ್, ಫಾ.ರಾಯಪ್ಪ, ಫಾ.ಗ್ಲಾಡ್ಸನ್, ನಗರಸಭಾ ನಾಮ ನಿರ್ಧೇಶಿತ ಸದಸ್ಯ ರಾಬರ್ಟ್, ಆಶ್ರಯ ಸಮಿತಿ ಸದಸ್ಯ ಜೇಮ್ಸ್, ಸಗಾಯಿದಾಸ್, ರವಿಕುಮಾರ್, ಡ್ಯಾನಿಯಲ್, ಶಶಿ , ಗೀತಾ, ಸವಿತಾ, ಆನಂದ್, ಸ್ಟೆಲ್ಲಾ ಹಾಗೂ ಇತರರು ಇದ್ದರು.
























































