ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಅಖಾಡ ಸಜ್ಜಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ತಯಾರಿಯ ಸಡಗರದಲ್ಲಿವೆ. ಈ ಬಾರಿ ಹೇಗಾದರೂ ಅಧಿಕಾರವನ್ನು ಪಡೆಯಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ಪಕ್ಷ ಭರ್ಜರಿ ಪ್ರಚಾರವನ್ನು ಆರಂಭಿಸಿದೆ.
ಇತ್ತ ರಾಜಧಾನಿ ಬೆಂಗಳೂರಿನ ಬೆಳವಣಿಗೆಯು ಚುನಾವಣೆ ಘೋಷಣೆಗೆ ಮುನ್ನವೇ ಕೌತುಕಕ್ಕೆ ಕಾರಣವಾಗಿದೆ. ಹೊಸ ಮುಖಗಳಿಗೆ ಕಾಂಗ್ರೆಸ್ ಈ ಬಾರಿ ಆದ್ಯತೆ ನೀಡಲಿದೆ ಎಂಬ ಸುದ್ದಿಯ ನಡುವೆ ರಾಜಾಜಿನಗರ ಕ್ಷೇತ್ರದಲ್ಲಿ ಯುವನಾಯಕಿಯ ಸಂಚಾರವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರದೇಶ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹ ಮೂರ್ತಿ ಅವರಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ. ಆದರೆ, ಭವ್ಯಾ ಅವರು ಒಂದು ಹೆಜ್ಜೆ ಮುಂದೆ ಹೋಗಿ ಅದಾಗಲೇ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ರಾಜಾಜಿನಗರದಲ್ಲಿ ತಾನು ಸ್ಪಾರ್ಧಾಕಾಂಕ್ಷಿಯಾಗಿದ್ದು ‘ನಿಮ್ಮ ಮಗಳಿಗೊಂದು ಅವಕಾಶ ಕೊಡಿ’ ಎಂದು ಅವರು ಅಭಿಯಾನ ಆರಂಭಿಸಿದ್ದಾರೆ.
ಯಾರು ಈ ಭವ್ಯ ನರಸಿಂಹ ಮೂರ್ತಿ..?
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಹಸದಲ್ಲಿರುವ ಭವ್ಯಾ ನರಸಿಂಹಮೂರ್ತಿ ಅವರು ರಾಜಾಜಿನಗರದ ಕೈಲಾಸ ವೈಕುಂಠ ದೇವಸ್ಥಾನದಲ್ಲಿ ನೆರವೇರಿಸಿದ ಕೈಂಕರ್ಯ ನಾಡಿನ ಗಮನಕೇಂದ್ರೀಕರಿಸಿದೆ. ಈ ಪೂಜೆ ಮೂಲಕ ದೇವರ ಆಶೀರ್ವಾದದೊಂದಿಗೆ ಪ್ರಚಾರ ಆರಂಭಿಸುತ್ತಿದ್ದೇನೆ ಎಂದೂ ಅವರು ಘೋಷಿಸಿಕೊಂಡಿದ್ದಾರೆ. ‘ನಿಮ್ಮ ಮಗಳನ್ನು ಆಶೀರ್ವದಿಸಿ, ಹರಸಿ’ ಎಂದು ಕೋರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳೂ ಗಮನಸೆಳೆದಿವೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರ ಆಕಾಂಕ್ಷಿಯಾಗಿದ್ದೇನೆ.ನಾಳೆ ಬೆಳಿಗ್ಗೆ 7ಕ್ಕೆ ಕೈಲಾಸ ವೈಕುಂಠ ದೇವಸ್ಥಾನ, ರಾಜಾಜಿನಗರದಲ್ಲಿ ಪೂಜೆ ಏರ್ಪಡಿಸಲಾಗಿದೆ.ದೇವರ ಆಶೀರ್ವಾದದೊಂದಿಗೆ ಪ್ರಚಾರ ಆರಂಭಿಸುತ್ತಿದ್ದೇನೆ
ಗುರುಹಿರಿಯರಲ್ಲಿ ನಿಮ್ಮ ಮಗಳನ್ನು ಆಶೀರ್ವದಿಸಿ,ಹರಸಿ ಎಂದು, ಯುವಜನತೆ ನನ್ನನ್ನು ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ🙏😊 pic.twitter.com/up93XKAyqJ— Bhavya Narasimhamurthy (@Bhavyanmurthy) December 24, 2022
ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್-ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಅಖಾಡವಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ಸುರೇಶ್ ಕುಮಾರ್ ಸ್ಪರ್ಧಿಸುವ ಸಾಧ್ಯತೆಗಳಿದ್ದು ಅವರ ವಿರುದ್ದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ. ಅದಾಗಲೇ ಸುಶಿಕ್ಷಿತ ಯುವ ನಾಯಕಿ ಭವ್ಯ ನರಸಿಂಹಮೂರ್ತಿ ಅವರ ಹೆಸರು ಮುನ್ಬಲೆಗೆ ಬಂದಿದೆ. ವಿದೇಶದಲ್ಲಿ ಶಿಕ್ಷಣ ಪಡೆದಿರುವ ಇವರು ರಾಜ್ಯ ರಾಜಕೀಯದಲ್ಲಿನ ಯುವಪ್ರತಿಭೆ. ಪ್ರಸಕ್ತ ಕೆಪಿಸಿಸಿ ವಕ್ತಾರೆಯಾಗಿರುವ ಅವರು, ಬಹಿರಂಗ ಚರ್ಚೆ, ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ವೈಖರಿಯು ನಾಯಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮದ ವಿರುದ್ದದ ಹೋರಾಟದ ನೇತೃತ್ವ ವಹಿಸಿರುವ ಅವರು ಯುವಜನರ ನಡುವೆಯೂ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
Part 1/4 pic.twitter.com/WP950VHcY5
— Bhavya Narasimhamurthy (@Bhavyanmurthy) October 16, 2022
ಕೆಲ ದಿನಗಳ ಹಿಂದೆ ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ ಸಂದರ್ಭಗಳಲ್ಲಿನ ಇವರ ಸಂಘಟನಾ ಚತುರತೆ ಬಗ್ಗೆ ಪಕ್ಷದ ಹಿರಿಯ ಮುಖಂಡರು ಕೊಂಡಾಡಿದ್ದರು. ಈ ಕಾರಣಕ್ಕಾಗಿಯೇ ಭವ್ಯಾ ಅವರನ್ನೇ ರಾಜಾಜಿನಗರದಲ್ಲಿ ಕೈ ಹುರಿಯಾಳನ್ನಾಗಿಸುವ ಪ್ರಯತ್ನ ಕೆಪಿಸಿಸಿ ಕಡೆಯಿಂದ ಸಾಗಿದೆ. ಅಷ್ಟರಲ್ಲೇ ಈ ಯುವ ನಾಯಕಿ ಕೂಡಾ ‘ಭವ್ಯ ಭರವಸೆ’ ಘೋಷಣೆಯೊಂದಿಗೆ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.






















































