ಬೆಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಮರೆತಿದೆಯೇ? ಬಹುಕಾಲದಿಂದ ಆಶಾ ಕಾರ್ಯಕರ್ತೆಯರು ವೇತನ ಹಕ್ಕನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಸರ್ಕಾರ ಮಾತ್ರ ಸಮಾಧಾನಪಡಿಸುತ್ತದೆಯೇ ಹೊರತು ಆಶಾ ಕಾರ್ಯಕರ್ತೆಯರ ಆಶಯಗಳನ್ನು ಈಡೇರಿಸಿಲ್ಲವಂತೆ. ಇದೀಗ ಸರ್ಕಾರದ ವಿರುದ್ದ ಮತ್ತೆ ಸಮರ ಸಾರಿದ್ದಾರೆ.
ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗಾಗಿ ಮತ್ತು ಇತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದು ಎಐಯುಟಿಯುಸಿ ಮುಖಂಡರು ತಿಳಿಸಿದ್ದಾರೆ.
ಈ ವರೆಗೂ ಭರವಸೆಗಳನ್ನು ನಂಬಿ ಮಾನವೀಯತೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಈ ಬಾರಿ ‘ಬಿಟ್ಟಿ ಚಾಕಾರಿ ಒಪ್ಪೋದಿಲ್ಲ, ವಿಯಮಿತ ವೇತನ ಪಾವತಿಸಿ..’ ಎಂಬ ಘೋಷಣೆಯೊಂದಿಗೆ ಬೆಂಗಳೂರು ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಅಖಾಡಕ್ಕೆ ಧುಮುಕಿದ್ದಾರೆ.
























































