ಮಂಗಳೂರು: ಸುರತ್ಕಲ್ ಟೋಲ್ ಕೇಂದ್ರವನ್ನು ರದ್ದುಗೊಳಿಸುವ ನೆಪದಲ್ಲಿ ಕರಾವಳಿಯ ಜನರನ್ನು ಬಿಜೆಪಿ ನಾಯಕರು ವಂಚಿಸಿದ್ದಾರೆಯೇ? ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಪ್ಲಾಜಾ ಜೊತೆ ವಿಲೀನ ಮಾಡಿ ಅಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆಯೇ?
ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರು ಕೂಡಾ ಕಿಡಿಕಾರಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಟ್ವೀಟ್ ಮೂಲಕವೂ ಕರಾವಳಿ ಜನರಪರ ನಿಂತಿರುವ ಬಿ.ಕೆ ಹರಿಪ್ರಸಾದ್, ಕರಾವಳಿಯ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.
ಅಕ್ರಮ ಹಣ ವಸೂಲಿ ಮಾಡುತ್ತಿದ್ದ ಸುರತ್ಕಲ್ ಟೋಲ್‌ಗೇಟ್ ರದ್ದು ಪಡಿಸಿದ್ದು, ಹೆಜಮಾಡಿ ಟೋಲ್‌ನಲ್ಲಿ ದುಪ್ಪಟ್ಟು ಸುಲಿಗೆಗಾಗಿ ವಿಲೀನಗೊಳಿಸಿದ್ದಾ? ಎಂದು ಪ್ರಶ್ನಿಸಿರುವ ಹರಿಪ್ರಸಾದ್, ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಆದರೆ ಸಂಸದರು ಬೇರೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ಟೋಲ್ ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆಮರೆಯ ಕಸರತ್ತನ್ನ ಬಹಿರಂಗಪಡಿಸುತ್ತಿರಾ? ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನ ಒಪ್ಪಿಕೊಳ್ಳುತ್ತಿರಾ? ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್‌ಗೇಟ್‌ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸುವಿರಾ? ಎಂದು ಸರಣಿ ಪ್ರಶ್ನೆಗಳನ್ನು ನಳಿನ್ ಕುಮಾರ್ ಅವರ ಮುಂದಿಟ್ಟಿದ್ದಾರೆ.
ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನು ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ ಎಂದು ಕಟು ಟೀಕೆ ಮಾಡಿರುವ ಹರಿಪ್ರಸಾದ್, ಅಕ್ರಮ ಟೋಲ್‌ನಂತೆ ನಿಮ್ಮನ್ನೂ ಎತ್ತಂಗಡಿ ಮಾಡುವ ಕಾಲ ಬಂದಾಯ್ತು ಎಂದು ಹೇಳಿದ್ದಾರೆ.







































































