ಬೆಂಗಳೂರು: ಮತದಾರರ ಮಾಹಿತಿ ಕಳವು ವಿಚಾರವಾಗಿ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದು ಅಭಿನಂದನಾರ್ಹ ಕ್ರಮವಾಗಿದೆ ಎಙದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕು. ಈ ಬಗ್ಗೆ ಬಿಬಿಎಂಪಿ ತನಿಖೆ ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಿಂದ ಮತ್ತಷ್ಟು ಬೇಡಿಕೆ:
ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲು ವ್ಯಕ್ತಿ ಸತ್ತಿದ್ದರೂ ಪ್ರಮಾಣ ಪತ್ರ ನೀಡಿಲ್ಲ ಎಂದರೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಪರಿಶೀಲಿಸಬೇಕು. ಮನೆ ಬದಲಾವಣೆ ಮಾಡಿದ್ದರೂ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು.
ಇವರು ಯಾವುದೋ ಸಂಸ್ಥೆ, ಶಾಸಕರು ಹಾಗೂ ಸಚಿವರ ಕಚೇರಿಯಲ್ಲಿ ಕೂತು ಅವರಿಗೆ ಬೇಕಾದಂತೆ ಕೆಲಸ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಸಂಚೇ ಇದೆ. ನಾವು ನಿನ್ನೆ ವಿಚಾರ ಪ್ರಸ್ತಾಪಿಸಿದಂತೆ ಕೇಂದ್ರ ಸರ್ಕಾರದ ಸಂಸ್ಥೆ ಮೂಲಕ ಖಾಸಗಿ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಹೇಗೆ ವರ್ಗಾವಣೆ ಆಯಿತು? ಯಾವ ಕಾರಣಕ್ಕೆ ಹಣ ನೀಡಲಾಗಿದೆ? ಈ ಬಗ್ಗೆ ತನಿಖೆ ಆಗಬೇಕು.
ಮಂತ್ರಿಯೊಬ್ಬರು ಆರಂಭದಲ್ಲಿ ನನಗೆ ಈ ಸಂಸ್ಥೆ ಗೊತ್ತೇ ಇಲ್ಲ ಎಂದರು. ನಂತರ ಈ ಸಂಸ್ಥೆ ಗೊತ್ತಿದೆ, ಆದರೆ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದರು. ಸಚಿವರು ಹಾಗೂ ಈ ಸಂಸ್ಥೆ ನಿರ್ದೇಶಕರ ಮಧ್ಯೆ ದೂರವಾಣಿ ಮಾತುಕತೆ ಎಲ್ಲವೂ ಇದೆ. ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸತ್ಯಾಂಶ ಹೊರಬರಲಿ..
ಮಹದೇವಪುರ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಈ ಕೆಲಸ ಮಾಡಿದ್ದೇವೆ ಎಂಬ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಪ್ರತಿ ಕ್ಷೇತ್ರದಲ್ಲೂ ಮತದಾರರ ಸೇರ್ಪಡೆ ಹಾಗೂ ಅಳಿಸಿರುವ ಪಟ್ಟಿ ಸಂಪೂರ್ಣವಾಗಿ ಮರು ಪರಿಷ್ಕರಣೆ ಆಗಬೇಕು. ಪ್ರತಿ ಮನೆಗೂ ಹೋಗಿ ಯಾರು ಸತ್ತಿದ್ದಾರೆ, ಯಾರು ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂಬುದನ್ನು ನೋಡಿ ನಂತರ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಿ. ಒಂದು ಕುಟುಂಬದ ಮತಗಳನ್ನು ಬೇರೆ, ಬೇರೆ ಬೂತ್ ಗಳಿಗೆ ವರ್ಗಾವಣೆ ಮಾಡಬಾರದು. ಆ ಕೆಲಸವೂ ಇಲ್ಲಿ ನಡೆದಿದೆ. ಇದೆಲ್ಲವೂ ಸರಿಯಾಗಬೇಕು. ಚುನಾವಣಾ ಆಯೋಗ ನಮ್ಮ ದೂರಿನ ಮೇಲೆ ಕೆಲವರನ್ನು ಅಮಾನತು ಮಾಡಿದೆ. ಆದರೆ ಈ ಮತ ಕಳ್ಳತನ ವಿಚಾರ ನಕಲಿ ನೋಟು ಮುದ್ರಣ ಮಾಡಿದಷ್ಟೇ ಅಪರಾಧ. ಇದಕ್ಕೆ ಜನರೇ ಶಿಕ್ಷೆ ನೀಡಬೇಕು.
ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿಯನ್ನು ಅನಧಿಕೃತವಾಗಿ ನೀಡುವುದು ಅಪರಾಧ. ಕಾಂಗ್ರೆಸ್ ಕಾಲದಲ್ಲಿ ಇದು ಆಗಿದ್ದರೆ ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ವ್ಯವಸ್ಥೆ ಸರಿಮಾಡುವುದು ಮುಖ್ಯ.
ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಆರ್ ಆರ್ ನಗರದಲ್ಲಿ ಗೌಡ ಎಂಬ ಹೆಸರಿದ್ದರೆ ಒಂದು ಹೆಸರು ಉಳಿಸಿಕೊಂಡು ಮೂರು ಹೆಸರು ತೆಗೆಯುತ್ತಾರೆ.
ಇದರಲ್ಲಿ ಮಂತ್ರಿ, ಶಾಸಕರು ಇದ್ದಾರೆ. ಶಾಸಕರ ಪತ್ರಗಳು ಈ ಸಂಸ್ಥೆಯ ಕಚೇರಿಯಲ್ಲಿ ಸಿಕ್ಕಿವೆ.
ಇದೇ ವೇಳೆ, ತಮ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದಾಗಿ ಹೇಳಿದ್ದಾರೆ. ಅವರು ಕೇಸು ಹಾಕಲಿ ಎಂದು ಡಿಕೆಶಿ ಸವಾಲು ಹಾಕಿದರು.





































































