ಬೆಂಗಳೂರು ಬಗೆಹರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದಿರುವ ಸಿಎಂ ಬಸವರಾಜ್ ಬೊಮ್ಮಯಿ, ಇದನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸೌಧ ಬಳಿ ‘ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ದೊಡ್ಡ ನಗರವಾಗಿ ಬೆಳೆಯುತ್ತಿದೆ. ವಿಚಾರಗಳನ್ನು ತಿಳಿದುಕೊಳ್ಳದೆ ಹಲವಾರು ವ್ಯಾಖ್ಯಾನಗಳು ಆಗುತ್ತಿರುವುದು ಸರಿಯಲ್ಲ. ಮೊನ್ನೆ ಬಂದ ಮಳೆಗೆ ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹವಾಗಿತ್ತು. 26 ಕ್ಷೇತ್ರಗಳಲ್ಲಿ ಪ್ರವಾಹ ಇರಲಿಲ್ಲ. ಆದರೆ ಇಡೀ ಬೆಂಗಳೂರು ಮುಳುಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಯಿತು. ಬೆಂಗಳೂರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾದ ನಗರ . ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಸಾಮರ್ಥ್ಯ ನಮ್ಮ ಸರ್ಕಾರಕ್ಕಿದೆ. ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಅಗತ್ಯವಿದೆ ಎಂದರು.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಕ್ಷಣ ಧಾವಿಸಿದ್ದು ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ. ಆರ್.ಎಫ್ ತಂಡಗಳು. ಬೆಂಗಳೂರಿನಲ್ಲಿ ಎಸ್.ಡಿ.ಆರ್.ಎಫ್ ನಡಿ ನೂರಕ್ಕಿಂತ ಹೆಚ್ವು ಯೋಧರು ಇದ್ದಾರೆ. ಯಾವುದೇ ಭಾಗದಲ್ಲಿ ಏನೇ ಆದರೂ ರಕ್ಷಣೆ ಮಾಡುವ ಸಾಮರ್ಥ್ಯ ಈ ತಂಡಕ್ಕಿದೆ. ನೂತನ ಸಲಕರಣೆಗಳನ್ನು ಸರ್ಕಾರ ಈಗಾಗಲೇ 20 ಕೋಟಿ ನೀಡಿದ್ದು, ಪುನಃ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಎಸ್.ಡಿ.ಆರ್.ಎಫ್ ಬಲಪಡಿಸುವುದು ನಮ್ಮ ಉದ್ದೇಶ. ಇನ್ನು ಎರಡು ಕಂಪನಿಗಳನ್ನು ಸೃಜಿಸಲು ಸೂಚಿಸಿದ್ದು, ಇದರಲ್ಲಿ ನಿವೃತ್ತ ಯೋಧರನ್ನು ನೇಮಕ ಮಾಡಿ ಕೊಳ್ಳಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಸೇನೆಯ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಇನ್ನೆರಡು ಕಂಪೆನಿಗಳಿಗೂ ನಿವೃತ್ತ ಸೇನಾ ಅಧಿಕಾರಿಗಳನ್ನು ನೇರವಾಗಿ ನೇಮಿಸಿಕೊಳ್ಳಲು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಆಧುನೀಕರಣ, ಸಂಖ್ಯೆಯ ಹೆಚ್ಚಳದ ಜೊತೆಗೆ ತರಬೇತಿ ಹಾಗೂ ಸಬಲೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಉಂಟಾದ ಪ್ರವಾಹದಲ್ಲಿ ಎನ್.ಡಿ.ಆರ್.ಎಫ್ ಬಹಳ ದೊಡ್ಡ ಸಹಾಯವನ್ನು ಮಾಡಿದ್ದು, ಅವರ ಕೆಲಸವನ್ನು ಸರ್ಕಾರ ಗುರುತಿಸಿ, ಶ್ಲಾಘಿಸುತ್ತದೆ ಎಂದರು.
ಅಗ್ನಿಶಾಮಕ ದಳದ ಸಬಲೀಕರಣಕ್ಕೆ ಹಲವಾರು ಯೋಜನೆಗಳಿಗೆ ನಮ್ಮ ಸರ್ಕಾರ ಅನುಮತಿಗಳನ್ನು ನೀಡಿದೆ. ಏರಿಯಲ್ ಏಣಿ ಕೂಡ ಇದರಲ್ಲಿ ಒಂದು.90 ಮೀಟರ್ ಎತ್ತರದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಅದನ್ನು ರಕ್ಷಿಸುವ ಸಾಮರ್ಥ್ಯ ಅಗ್ನಿಶಾಮಕ ದಳಕ್ಕಿದೆ. ಇದು ಬೇರೆ ಯಾವ ನಗರಗಳಲ್ಲಿ ಇಲ್ಲ.
ಸಂಚಾರ ದಟ್ಟಣೆ ಸುಗಮಗೊಳಿಸಲು ಕ್ರಮ
5000 ಹೊಸ ವಾಹನಗಳು ಪ್ರತಿ ನಿತ್ಯ ರಸ್ತೆಗೆ ಇಳಿಯುತ್ತವೆ. ರಸ್ತೆ ಮಾತ್ರ ಅಷ್ಟೇ ಇದೆ. ಆದರೂ ಕೂಡ ಸಂಚಾರ ನಿರ್ವಹಣೆಗೆ ವ್ಯವಸ್ಥೆ ಗಳನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಸಿಂಕ್ರೋನೈಜಿಂಗ್ ಹೊಸ ವಿಧಾನಗಳನ್ನು ಬಳಸಿ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ. 7500 ಕ್ಯಾಮರಾಗಳನ್ನು ನಿರ್ಭಯ ಯೋಜನೆಯಡಿ ಅಳವಡಿಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಯ ಜೊತೆಗೆ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಉಪಯೋಗ ಮಾಡಲಾಗುತ್ತಿದೆ ಎಂದರು. ಕೃತಕ ಬುದ್ಧಿಮತ್ತೆ, 360 ಡಿಗ್ರಿ ಕೆಲಸ ಮಾಡುವ ಸಾಮರ್ಥ್ಯ ಅವುಗಳಿಗಿದೆ ಎಂದರು.
ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆದೇಶ
ಈಗಾಗಲೇ ಒಮ್ಮೆ ಗುಂಡಿಗಳನ್ನು ಮುಚ್ಚಲಾಗಿದೆ. ಈಗ ಮತ್ತೆ ನಿರಂತರವಾಗಿ ಮಳೆಯಾಗಿದ್ದರಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅವುಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಮಳೆ ಕಡಿಮೆಯಾದರೆ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಳೆ ಇದ್ದ ಸಂದರ್ಭದಲ್ಲಿ ಹಾಕಿದರೆ ಅದು ಉಳಿಯುವುದಿಲ್ಲ. ಯೋಜನಾ ಬದ್ಧವಾಗಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದರು.
ಅಗ್ನಿಶಾಮಕ ದಳಕ್ಕೆ ಪ್ರಬಲ ಅಸ್ತ್ರ ದೊರೆತಿರುವ ಪ್ರಮುಖ ದಿನ. ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಉಪಯೋಗಿಯಾಗಲಿದೆ. ಅತಿ ಕಡಿಮೆ ಸಮಯದಲ್ಲಿ ಅಪಘಾತವನ್ನು ತಡೆಯಬಹುದಾದ ಕೆಲಸ ಮಾಡಲಾಗುವುದು. ಅಮರ್ ಪಾಂಡೆ ಅವರು ಇದಕ್ಕೆ ಶ್ರಮವಹಿಸಿದ್ದಾರೆ. ತಾಂತ್ರಿಕವಾಗಿ, ಆಡಳಿತಾತ್ಮಕವಾಗಿ ಕ್ರಮಗಳನ್ನು ಜರುಗಿಸಿದ್ದಾರೆ. ಜನರಿಗಾಗಿ ಇದು ಸಮರ್ಪಕವಾಗಿ ಬಳಕೆಯಾಗಲಿ ಎಂದು ತಿಳಿಸಿದರು.
ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಕರೆ
ದೀಪಾವಳಿ ಹಬ್ಬ ನಾಡಿನ ಸಮಸ್ತರಿಗೂ ಬೆಳಕು ತರಲಿ. ಜಾಗು ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ಧ ಹಾಗೂ ವಾಯು ಮಾಲಿನ್ಯ ತಡೆಯೋಣ, 125 ಡೆಸಿಬಿಲ್ ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ ಎಂದು ಕರೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀ ನಿವಾಸ ಪೂಜಾರಿ, ಸೋಮಶೇಖರ್, ಶಿವರಾಮ ಹೆಬ್ಬಾರ್, ಸಂದಸ ಪಿ.ಸಿ.ಮೋಹನ್, ಶಾಸಕ ನಿರಂಜನ್ ಕುಮಾರ್, ಹಾಗೂ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಅಗ್ನಿಶಾಮಕ ಸೇವೆಗಳ ಡಿಜಿಪಿ ಡಾ: ಎ. ಕೆ.ಪಾಂಡೆ ಉಪಸ್ಥಿತರಿದ್ದರು.



















































