ಗದಗ: ಡಿಕೆಶಿ- ಸಿದ್ರಾಮಣ್ಣನನ್ನು ಜೋಡಿಸುವ ಯಾತ್ರೆ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ಲೇಷಿಸಿದ್ದಾರೆ..
ರೋಣದಲ್ಲಿ ಬಿಜೆಪಿಯ ‘ಜನಸಂಕಲ್ಪ’ ಯಾತ್ರೆಯ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿದ್ರಾಮಣ್ಣ ಕ್ಷೇತ್ರ ಹುಡುಕುವ ಯಾತ್ರೆ ಇದು. ಸಿದ್ರಾಮಣ್ಣ ವರುಣಾ ಕ್ಷೇತ್ರ ಕಳೆದುಕೊಂಡಿದ್ದಾರೆ. ಬಾದಾಮಿಯಲ್ಲಿ ಜನ ಓಡಿಸ್ತಾರೆ. ಕೋಲಾರದ ಜನ ಬೇಡ ಎಂದಿದ್ದಾರೆ ಎಂದು ತಿಳಿಸಿದರು.
ಯಾತ್ರೆ ವಿಚಾರದಲ್ಲಿ ಕಾಂಗ್ರೆಸ್ ನವರು ನಮ್ಮನ್ನು ಕಾಪಿ ಮಾಡುತ್ತಿದ್ದಾರೆ. ಜನರು ತಿರಸ್ಕರಿಸಿದ ಬಳಿಕ ಅವರು ಯಾತ್ರೆಗೆ ಮುಂದಾಗಿದ್ದಾರೆ. ಜನರಿಗೆ ನಮ್ಮ ಸರಕಾರಗಳ ಸಾಧನೆ, ಅಭಿವೃದ್ಧಿ ಕಾರ್ಯವನ್ನು ತಿಳಿಸಲು ಮತ್ತು ಜನಪರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ನಾವು ಈ ಸಂಕಲ್ಪ ಯಾತ್ರೆಗಳನ್ನು ಮಾಡುತ್ತಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಜೋಡೋ ಪಾದಯಾತ್ರೆ ಮಾಡಲು ಇವರಿಗೆ ಜ್ಯೋತಿಷಿ ಹೇಳಿದರೇ? ಎಂದು ಕೇಳಿದ ಅವರು, ಸಿದ್ರಾಮಣ್ಣ ತಿರುಕನ ಕನಸನ್ನು ಕಾಣುತ್ತಿದ್ದಾರೆ. ರಾಹುಲ್ ಗಾಂಧಿ ಬಂದ ಕಾರಣ ಕಾಂಗ್ರೆಸ್ಸಿಗರು ಯಾತ್ರೆಗೆ ಬಂದಿದ್ದಾರೆ. ಹೃದಯಪೂರ್ವಕವಾಗಿ ಅವರು ಯಾತ್ರೆಗೆ ಹೋಗುತ್ತಿಲ್ಲ ಎಂದು ತಿಳಿಸಿದರು.
ಖರ್ಗೆಯವರ ಭಯ ಸಿದ್ರಾಮಣ್ಣನನ್ನು ಕಾಡುತ್ತಿದೆ. ಖರ್ಗೆ ಅಧ್ಯಕ್ಷರಾಗುವ ಸಣ್ಣ ಭಯ ಸಿದ್ರಾಮಣ್ಣನಿಗೆ ಆರಂಭವಾಗಿದೆ. ಮೂರನೇ ಶಕ್ತಿ ಕೇಂದ್ರ ಆರಂಭದ ಭಯ ಅವರಲ್ಲಿದೆ. ಸಿದ್ರಾಮಣ್ಣ ಖರ್ಗೆಯವರಿಗೆ ದೋಖಾ ಕೊಟ್ಟವರು. ಖರ್ಗೆಯವರನ್ನು ಸಿಎಂ ಸ್ಥಾನಕ್ಕೆ ಏರಲು ಬಿಡದವರು. ಖರ್ಗೆ ಸೋಲಿಗಾಗಿ ಒಳ ಒಪ್ಪಂದ ಮಾಡಿದವರು. ಹಾಗಾಗಿ ಸಿದ್ರಾಮಣ್ಣನಿಗೆ ಮುಂದೆ ಸೀಟು ಸಿಗದ ಭಯ ಶುರುವಾಗಿದೆ ಎಂದು ವಿಶ್ಲೇಷಿಸಿದರು.
ಸಿದ್ರಾಮಣ್ಣ ಶೇ 40 ಆರೋಪಕ್ಕೆ ಸಾಕ್ಷಿ ಕೊಡುತ್ತಿಲ್ಲ. ಅವರ ಅರ್ಕಾವತಿ ಹಗರಣಗಳಿಗೆ ಪುರಾವೆಗಳು ನಮ್ಮ ಬಳಿ ಇವೆ. ಈ ರಾಜ್ಯದಲ್ಲಿ ಮಾಡಿದ ಹಾಸ್ಟೆಲ್ ಬೆಡ್‍ಶೀಟ್ ಹಗರಣ, ಮೊಟ್ಟೆ ಹಗರಣ ಸೇರಿ ಎಲ್ಲವೂ ದಾಖಲೆಗಳಿವೆ. ನಾವು ದಾಖಲೆಗಳ ಜೊತೆ ಮಾತನಾಡುತ್ತೇವೆ. ಇವರೂ ದಾಖಲೆ ಜೊತೆ ಮಾತನಾಡಲಿ ಎಂದು ಸವಾಲೆಸೆದರು.
ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಭ್ರಷ್ಟಾಚಾರ ಮಾಡಿ ಜಾಮೀನಿನಲ್ಲಿ ಇರುವವರೆಲ್ಲರೂ ಕಾಂಗ್ರೆಸ್ ನಾಯಕರು ಎಂದು ಪ್ರಶ್ನೆಗೆ ಉತ್ತರಿಸಿದರು.
























































