ಬೆಂಗಳೂರು: ಹಿಂದಿ ದಿವಸ ಆಚರಣೆ ಖಂಡಿಸಿ ವಿಧಾನಸೌಧ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಜೆಡಿಎಸ್ ಕಾರ್ಯಕರ್ತರು ಕನ್ನಡ ಶಾಲು ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನಡಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗಿಯಾದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ,ಕೇಂದ್ರ ಸರಕಾರ ರಾಜ್ಯದಲ್ಲಿ ಕನ್ನಡವನ್ನು ಧಿಕ್ಕರಿಸಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇಪದೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ಇವತ್ತು ಹಿಂದಿ ಆಚರಣೆ ಮಾಡುತ್ತಿರುವುದಕ್ಕೆ ನಮ್ಮ ಪಕ್ಷ ಜಾತ್ಯತೀತ ಜನತಾದಳದ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ದೇಶದಲ್ಲಿ ನಾನಾ ಭಾಷೆ ಮಾತಾಡುವ ನಾಗರೀಕರು ಇದ್ದಾರೆ. ಈಗಾಗಲೇ ಅಮೃತ ಮಹೋತ್ಸವ ಮಾಡಿದ್ದೇವೆ. ಅದರೂ ಕೇಂದ್ರ ಬಿಜೆಪಿ ಸರಕಾರ ಕೇವಲ ಒಂದು ಭಾಷೆಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.
ಒಂದು ಭಾಷೆ ಒಂದು ರಾಷ್ಟ್ರ ಎಂಬ ಗೃಹ ಸಚಿವರ ಹೇಳಿಕೆ ಸರಿಯಲ್ಲ. ಕೇವಲ ಹಿಂದಿ ಒಂದು ಭಾಷೆಯಿಂದ ಭಾರತ ಒಂದಾಗಿ ಉಳಿದಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಅದನ್ನೇ ಹಾಳು ಮಾಡಿದರೆ ದೇಶವನ್ನು ಓಡೆದಂತೆ. ಅವರು ಕೇಲ ಭಾವನಾತ್ಮಕ ವಿಚಾರ ಕೆಣಕುತ್ತಾ ದೇಶವನ್ನು ವಿಭಜಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಉತ್ತರ ಭಾರತದ ಕೆಲವು ಭಾಗದಲ್ಲಿ ಹಿಂದಿ ಇಲ್ಲ. ಅನೇಕ ರಾಜ್ಯಗಳಲ್ಲಿ ಅವರವರದೇ ಭಾಷೆ ಇದೆ. ತಮ್ಮ ಭಾಷೆಯನ್ನೇ ಮಾತನಾಡುತ್ತಾ ನೆಮ್ಮದಿಯಿಂದ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಸುಕುವ ಕೇಂದ್ರದ ನಡೆಗೆ ನಮ್ಮ ವಿರೋಧ ಇದೆ. ಕನ್ನಡದ ಬಗ್ಗೆ ಯಾಕಿಷ್ಟು ಅಸಹನೆ ಇವರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಹಿಂದಿ ದಿವಸದ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣ ವ್ಯಯ ಮಾಡೋದು ಎಷ್ಟು ಸರಿ? ಜನ ಈಗಾಗಲೇ ನೆರೆ ಹಾವಳಿ ಯಿಂದ ತತ್ತರಿಸಿದ್ದಾರೆ. ಅವರ ನೆರವಿಗೆ ಭಾರದೆ ಹಿಂದಿ ಭಾಷೆಯ ವಿಚಾರ ಸರಕಾರಕ್ಕೆ ಮುಖ್ಯವಾಗಿದೆ. ಇದಕ್ಕೆ ಕನ್ನಡಿಗರ ಧಿಕ್ಕಾರವಿದೆ ಎಂದು ಅವರು ಕಿಡಿ ಕಾರಿದರು.
























































