ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ಕ್ಷೇತ್ರದ ಬಗ್ಗೆ ತಿಳಿಯದವರು ಕಡಿಮೆ. ಪುರಾಣದಲ್ಲಿ ಸಮಾಜ ಕಂಠಕ ರಾಕ್ಷಸರ ವಧೆ ಮಾಡಿ ರುಂಡವನ್ನು ದೇವಿ ಚೆಂಡಾಡಿದ ನಾಡು ಈ ಕರಾವಳಿಯ ಪೊಳಲಿ. ಇಲ್ಲಿರುವ ಶ್ರೀ ರಾಜರಾಜೇಶ್ವರಿ ದೇಗುಲ ಜಗತ್ತಿನಲ್ಲೇ ವಿರಳ ಎಂಬಂತಿರುವ ನಿತ್ಯಪೂಜಿತ ಏಕೈಕ ಬೃಹತ್ ಮೃಣ್ಮಯ ಮೂರ್ತಿಯಿರುವ ಕ್ಷೇತ್ರ ಎಂಬುದು ಆಸ್ತಿಕರ ಮಾತು. ಇದೀಗ ಈ ಕ್ಷೇತ್ರ ‘ಕದಿರು ಹಬ್ಬ’ದ ಸಡಗರದಲ್ಲಿದೆ.
ತುಳುನಾಡಿನ ಜನರು ಒಂದಿಲ್ಲೊಂದು ಉದ್ದೇಶವನ್ನು ಆಧರಿಸಿ ಆಗಾಗ್ಗೆ ಹಬ್ವಗಳನ್ನು, ಉತ್ಸವಗಳನ್ನು ಆಚರಿಸುತ್ತಲೇ ಇರುತ್ತಾರೆ. ಅದರಲ್ಲೂ ಪೊಳಲಿ ಕ್ಷೇತ್ರ ಸುತ್ತಮುತ್ತಲ ಸಾವಿರ ಸೀಮೆಯ ಗ್ರಾಮಗಳ ಜನರಿಗೆ ‘ಪೊಳಲಿ ಚೆಂಡು’ ಎಂಬ ಜಾತ್ರೆಯೇ ಸರ್ವ ಶ್ರೇಷ್ಠ. ಅನಂತರ ಅನೇಕ ಹಬ್ಬ-ಆಚರಣೆ-ಉತ್ಸವಗಳು ನಡೆಯುತ್ತಿರುತ್ತವೆ. ಅದರ ಬೆನ್ನಲ್ಲೇ ‘ಕದಿರು ಹಬ್ಬ’ ಅತ್ಯಂತ ವೈಶಿಷ್ಟ್ಯಪೂರ್ಣ.
ಮುಂಗಾರು ಆರಂಭವಾಗುತ್ತಿದ್ದಂತೆಯೇ ಬೇಸಾಯವೂ (ವ್ಯವಸಾಯವೂ) ಆರಂಭವಾಗುತ್ತದೆ. ಮಳೆಗಾಲದ ಆರಂಭದಲ್ಲಿ ನಾಟಿ ನಡೆದ ಗದ್ದೆಗಳಲ್ಲಿ ಇದೀಗ ಭತ್ತದ ಪೈರು ನಳನಳಿಸುವಂತಿದೆ. ಅದಾಗಲೇ ಶುಭ ಸಂದರ್ಭವನ್ನು ನಿಶ್ಚಯಿಸಿ ‘ಕೊರಳು ಹಬ್ವ’ವನ್ನು ಆಚರಿಸಲಾಗುತ್ತದೆ.
ವರ್ಷಾರಂಭದ ಬೆಳೆಯನ್ನು ಕಂಡು ಸಂಭ್ರಮಿಸಿ ಈ ಕ್ಷಣವನ್ನು ಹಬ್ಬದ ರೂಪದಲ್ಲಿ ಆಚರಿಸಿದರೆ ಸಿರಿ ಸಂಪತ್ತು ಮನೆತುಂಬುತ್ತದೆ ಎಂಬುದು ನಂಬಿಕೆ. ಇದೂ ಕೂಡಾ ಪೊಳಲಿ ರಾಜರಾಜೇಶ್ವರಿ ದೇವಿಯ ಪ್ರಸಾದವನ್ನು ಆಧಾರವಾಗಿಟ್ಟು ‘ಕೊರಳು ಹಬ್ಬ’ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ.
ಈ ಕೊರಳು ಹಬ್ಬವನ್ನೇ ‘ಕದಿರು ಹಬ್ಬ’ ಎಂದೂ ಕರೆಯಲಾಗುತ್ತದೆ. ಈ ಹಬ್ಬವನ್ನು ತುಳುನಾಡಿನ ಒಂದು ಭಾಗದ ಜನರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಈ ಹಬ್ಬದ ಆಚರಣೆಯೂ ವಿಶೇಷ. ಬೆಳಿಗ್ಗೆ ಭತ್ತದ ತೆನೆಯ ರಾಶಿಯನ್ನು ದೇಗುಲಕ್ಕೆ ಹೊತ್ತು ತರಲಾಗುತ್ತದೆ. ಬಳಿಕ ದೇವಿ ವಿಗ್ರಹದ ಮುಂದೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಅನನ್ಯ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಈ ಪೂಜೆ ಬಳಿಕ ಭಕ್ತರಿಗೆ ಒಂದೊಂದು ತೆನೆಯನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಈ ಪ್ರಸಾದ ರೂಪದ ತೆನೆಯೊಂದಿಗೆ ಮರಳುವ ಭಕ್ತರು ದಾರಿ ಮಧ್ಯೆ ಹೊಲ-ಗದ್ದೆಗಳಿಂದ ಮತ್ತಷ್ಟು ತೆನೆ ಸಂಗ್ರಹಿಸಿ ಮನೆಗಳಿಗೆ ಒಯ್ತುತ್ತಾರೆ.
ಹೊಲ ಯಾರದ್ದೇ ಆಗಿರಲಿ, ತೆನೆ ಕೀಳುವವರೂ ಯಾರೇ ಆಗಿರಲಿ, ಕದಿರು ಹಬ್ಬದ ಸಂದರ್ಭದಲ್ಲಿ ತಮ್ಮ ಗದ್ದೆಯ ಪೈರುಗಳಿಗೆ ಹಾನಿಯಾದರೂ ಯಾರೊಬ್ಬ ರೈತರೂ ಅಲ್ಲಿ ನೊಂದುಕೊಳ್ಳುವುದಿಲ್ಲ ಎಂಬುದು ವಿಶೇಷ.
ಈ ಕೊರಳು ರಾಶಿಯನ್ನು ಮನೆಗಳಿಗೆ ಕೊಂಡೊಯ್ಯುವ ಭಕ್ತರು, ಅದಕ್ಕೆ ದೇವಾಲಯದಲ್ಲಿ ಪೂಜೆ ಮಾಡಿದ ರೀತಿಯಲ್ಲೇ ತಮ್ಮ ಮನೆಯ ತುಳಸಿ ಕಟ್ಟೆಯಲ್ಲಿ ಅದನ್ನಿರಿಸಿ ಕೈಂಕರ್ಯ ನೆರವೇರಿಸಿ ತಮ್ಮ ಕುಟುಂಬ ಸದಸ್ಯರಿಗೆ ಹಂಚುತ್ತಾರೆ. ತಮ್ಮ ಮನೆ,ಕೊಟ್ಟಿಗೆ, ಅಂಗಡಿ-ಮಳಿಗೆಗಳಿಗೆ, ಕೃಷಿ ಯಂತ್ರೋಪಕರಣಗಳಿಗೆ, ಬಸ್ಸು ಕಾರು ಸಹಿತ ವಾಹನಗಳಿಗೂ ಇದನ್ನು ಕಟ್ಟುತ್ತಾರೆ.
ಎಲ್ಲೆಲ್ಲಾ ಈ ಭತ್ತದ ಕೊರಳನ್ನು ಕಟ್ಟುತ್ತಾರೋ ಅಲ್ಲಿ ಶ್ರೀಮಂತಿಕೆ ಕಂಗೊಳಿಸುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಪೊಳಲಿಯ ಭತ್ತದ ತೆನೆಗೆ ಅದರದ್ದೇ ಆದ ಮಹತ್ವ ಇದೆ. ಪೊಳಲಿ ಊರನ್ನು ತುಳುವರು ‘ಪುರಲ್’ ಎಂದೇ ಕರೆಯುತ್ತಾರೆ. ಹಾಗಾಗಿ ‘ಪುರಲ್ದ ಕುರಾಲ್’ ಎಂದೂ ಈ ತೆನೆ ಸಂಪ್ರದಾಯಕ್ಕೆ ಹೇಳುವುದುಂಟು.
ಕರಾವಳಿಗಷ್ಟೇ ಸೀಮಿತವಲ್ಲ:
ಪೊಳಲಿಯನ್ನು ಆಧಾರವಾಗಿಟ್ಟು ತುಳುವರೇ ಹೆಚ್ಚಿರುವ ಮಂದಿ ರಾಜ್ಯ ಹೊರ ರಾಜ್ಯಗಳಲ್ಲೂ, ದೇಶ-ವಿದೇಶಗಳಲ್ಲೂ ‘ಪುರಲ್ದ ಕುರಾಲ್’ ಹಬ್ವವನ್ನು ಆಚರಿಸಲಾಗುತ್ತಿದೆ. ಪೊಳಲಿ ದೇವಾಲಯದಿಂದ ಪಡೆದ ‘ಕೊರಳು’ನ್ನು ಮುಂಬೈ, ಬೆಂಗಳೂರು ಸಹಿತ ಬೇರೆ ಬೇರೆ ಊರುಗಳಿಗೆ ತುಳುನಾಡು ಮೂಲದವರು ತರಿಸಿಕೊಂಡು ಈ ‘ಕೊರಳು ಕೈಂಕರ್ಯ’ ಆಚರಿಸಿ, ಈ ಹಬ್ಬ ಸಂಭ್ರಮದಲ್ಲಿ ಮಿಂದೇಳುತ್ತಾರೆ.



ಪುರಾಲ್ದಕುರಲ್ 🙏
ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ತೆನೆ ಹಬ್ಬ ಆಚರಣೆ. pic.twitter.com/6BSFYfI1y2
— Rajesh Naik U (Modi Ka Parivar) (@URajeshNaik) September 8, 2022