‘ನಾರಾಯಣ ಗುರುಗಳ ಹೆಸರಲ್ಲಿ ರಾಜಕೀಯ ಮಾಡುವುದನ್ನು ಅನುಯಾಯಿಗಳು ಸಹಿಸಲ್ಲ’ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಕರಾವಳಿ ಬಿಲ್ಲವರು..!
ಮಂಗಳೂರು: ಶ್ರೀ ನಾರಾಯಣ ಗುರುಗಳ ವಿಚಾರದಲ್ಲಿ ಸರ್ಕಾರಗಳ ನಡೆ ಬಗ್ಗೆ ಬಿಲ್ಲವ ಸಮುದಾಯದ ಅಸಮಾಧಾನ ತಣಿಸಲು ಬಿಜೆಪಿ ನಾಯಕರು ಹರಸಾಹಸಪಡುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ರಾಜ್ಯಮಟ್ಟದ ಗುರುಜಯಂತಿ ಆಚರಿಸುವ ಬಗ್ಗೆ ಸರ್ಕಾರದ ಪ್ರಮುಖರು ಕೈಗೊಂಡಿರುವ ನಿರ್ಧಾರ ಕೂಡಾ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ನಿರ್ಧಾರ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ಲವ ಸಮುದಾಯದ ಮುಖಂಡರು, ‘ಇದು ಗೌರವ ಭಾವವೋ ಅಥವಾ ರಾಜಕೀಯ ಸ್ವಾರ್ಥವೋ?’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕರಾವಳಿ ದಸರಾ ಕೇಂದ್ರವೆನಿಸಿರುವ, ಬಿಲ್ಲವ ಸಮುದಾಯದ ಶ್ರದ್ಧಾ ಕೇಂದ್ರ ಎಂದೇ ಬಿಂಬಿತವಾಗಿರುವ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಕೂಡಾ ಸರ್ಕಾರದ ನಿರ್ಧಾರದ ಹಿಂದೆ ಸಮಾಜ ಒಡೆಯುವ ಪಿತೂರಿ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮರಾಜ್, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವವನ್ನು ಜಗತ್ತಿಗೆ ಸಾರಿ ಎಲ್ಲರ ನೆಚ್ಚಿನ ಗುರುವಾದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅಸಮಾನತೆಯನ್ನು ಮೆಟ್ಟಿ ನಿಂತು, ಸಮಾಜದ ಕೆಳವರ್ಗದವರಿಗೂ ದೇವಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟವರು. ನಾರಾಯಣ ಗುರುಗಳ ಅನುಯಾಯಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಕರಾವಳಿಯೆಲ್ಲೆಡೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ, ಸಂಘಗಳು ನಿರ್ಮಾಣಗೊಂಡು ಗುರುಗಳನ್ನು ದೇವರಂತೆ ಪೂಜೆ ಮಾಡಿಕೊಂಡು ಬರಲಾಗಿದೆ. ಹಾಗೆಯೇ ಅವರ ಜನ್ಮದಿನವನ್ನು ಅತ್ಯಂತ ಭಕ್ತಿ, ಶ್ರದ್ಧಾಪೂರ್ವಕವಾಗಿ ಎಲ್ಲ ಸಂಘಗಳಲ್ಲೂ ಬೆಳಿಗ್ಗೆಯಿಂದ ಸಂಜೆಯವರೆಗೆ ಭಜನೆ, ಪೂಜೆ, ಅನ್ನ ಸಂತರ್ಪಣೆ, ಮೆರವಣಿಗೆ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ನಡೆಸಲಾಗುತ್ತಿದೆ. ಎಲ್ಲ ಕಡೆಯೂ ಆಮಂತ್ರಣ ಪತ್ರಿಕೆಗಳ ಹಂಚಿಕೆಯೂ ಮುಗಿದಿದೆ ಎಂದಿದ್ದಾರೆ.

ಈ ಮಧ್ಯೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿವರ್ಷ ನಡೆಯುತ್ತಿದ್ದ ರಾಜ್ಯಮಟ್ಟದ ಆಚರಣೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಗೆ ಕೇವಲ ನಾಲ್ಕು ದಿನ ಬಾಕಿ ಇರುವಾಗ ಮಂಗಳೂರಿನ ಟಿ.ಎಂ.ಎ ಪೈ ಹಾಲ್ ನಲ್ಲಿ ನಡೆಸಲು ತರಾತುರಿಯಲ್ಲಿ ತೀರ್ಮಾನಿಸಿರುವ ಹಿಂದಿನ ಮರ್ನವೇನು ಎಂದು ಪ್ರಶ್ನಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಸಲು ಮಾಡಿರುವ ಷಡ್ಯಂತ್ರವೇ? ಅಸಮಾಧಾನದಲ್ಲಿರುವ ಸಮುದಾಯದ ಕಣ್ಣೊರೆಸುವ ತಂತ್ರವೇ? ಎಂಬುದು ಕರಾವಳಿಯ ಬಿಲ್ಲವರ ಪ್ರಶ್ನೆ.
ಅಷ್ಟಕ್ಕೂ ದಕ್ಷಿಣ ಕನ್ನಡದಲ್ಲೇ ಆಚರಣೆ ಮಾಡಬೇಕಂತಿದ್ದರೆ ಮೊದಲೇ ನಿರ್ಧಾರ ಮಾಡಬೇಕಿತ್ತು. ತಿಂಗಳ ಹಿಂದೆಯೇ ಮಂಗಳೂರಿನಲ್ಲೇ ಅಚರರಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಂದಿರಗಳಲ್ಲಿ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಈ ಭಾರಿ ಇಷ್ಟು ಗೊಂದಲ ಮಾಡುವುದಕ್ಕಿಂತ ಗೌರವಪೂರ್ವಕವಾಗಿ ವಿಧಾನಸೌಧದಲ್ಲಿ ಆಚರಣೆ ಮಾಡಿ, ಮುಂದಿನ ವರ್ಷ ಮೊದಲೇ ನಿರ್ಧಾರ ಕೈಗೊಂಡು ಮಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಬಹುದಿತ್ತು ಎಂದಿರುವ ಬಿಲ್ಲವ ಸಮುದಾಯದ ಮುಖಂಡರೂ ಆದ ಪದ್ಮರಾಜ್ ಅವರು, ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.


























































