ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ವಹಣೆಯಾಗುತ್ತಿರುವ ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಗಿತಗೊಳಿಸುವಂತೆ ಸಾರ್ವಜನಿಕರಿಂದ ಒತ್ತಡ ಕೇಳಿಬರುತ್ತದೆ. ಹೀಗಾಗಿ ಕಸದ ಘಟಕಕ್ಕೆ ಖುದ್ದು ಭೇಟಿ ನೀಡಿ ಸರ್ಕಾರಕ್ಕೆ ವಸ್ತುಸ್ಥಿತಿಯ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ತ್ಯಾಜ್ಯ ಸಂಸ್ಕರಣ ಘಟಕಗಳ ಸಮಸ್ಯೆ, ಪರಿಹಾರದ ಕುರಿತು ಚರ್ಚಿಸಲು ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ಸಂಸ್ಕರಣ ಘಟಕದ ನಿರ್ವಹಣೆ ಸೂಕ್ತವಾಗಿಲ್ಲ, ವಾಸನೆ, ನೊಣದ ಸಮಸ್ಯೆ ತೀವ್ರವಾಗಿದೆ ಎಂದು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು, ಅಪಾರ್ಟ್ಮೆಂಟ್ ಅಸೋಸಿಯೇಷನ್ ನವರ ಜೊತೆ ಸಾಕಷ್ಟು ಸಭೆ ನಡೆಸಿದಾಗ ಘಟಕ ಸ್ಥಗಿತಗೊಳಿಸುವ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.
ಬಿಬಿಎಂಪಿ ಅಧಿಕಾರಿಗಳು ಘಟಕಕ್ಕೆ ತೆರಳಿ ವಸ್ತುಸ್ಥಿತಿ ಕುರಿತು ವರದಿ ಸಿದ್ಧಪಡಿಸಲಿ. ಅಧಿಕಾರಿಗಳೊಂದಿಗೆ ನಾನು ಕೂಡ ಘಟಕಕ್ಕೆ ಭೇಟಿ ನೀಡುತ್ತೇನೆ. ಘಟಕ ನಿರ್ವಹಣೆ ಕುರಿತಂತೆ ಕೈಗೊಂಡಿರುವ ಕ್ರಮಗಳು, ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ. ಸಮಸ್ಯೆ ನಿವಾರಣೆಗೆ ಪರ್ಯಾಯ ವ್ಯವಸ್ಥೆ ಇದ್ದರೆ ಪ್ರಯತ್ನಿಸಿ, ಇಲ್ಲವೇ ವಸ್ತುಸ್ಥಿತಿಯ ಆಧಾರದ ಮೆಲೆ ಘಟಕ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್ ಮಾತನಾಡಿ, ಘಟಕಕ್ಕೆ ಭೇಟಿ ನೀಡಲಾಗುವುದು. ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು. ಈ ಕುರಿತು ಸಾರ್ವಜನಿಕರು ಯಾವುದೇ ರೀತಿಯ ಸಲಹೆಗಳನ್ನು ನೀಡಿದ್ದಲ್ಲಿ ಅದನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರಲು ಯತ್ನಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾತನಾಡಿ, ಸಮಸ್ಯೆ ನಿವಾರಣೆಗೆ ಸಕಲ ರೀತಿಯಲ್ಲಿ ಪ್ರಯತ್ನಿಸಲಾಗುವುದು. ಪ್ರತಿ ವಾರ್ಡ್ ಗಳಲ್ಲಿ ಕಸ ಘಟಕಗಳ ಆರಂಭದ ಕುರಿತು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು, ಮುಖಂಡರು, ಕಸ ಘಟಕ ಸ್ಥಗಿತಗೊಳಿಸುವಂತೆ ಸಚಿವರು, ಅಧಿಕಾರಿಗಳಿಗೆ ಒತ್ತಾಯಿಸಿದರು. ಕಸ ಘಟಕದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವರು ನಿವೇಶನಗಳನ್ನು ತೊರೆಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 35ರಲ್ಲಿನ ಹೆಮ್ಮಿಗೆಪುರ ವ್ಯಾಪ್ತಿಯ ಉತ್ತರಹಳ್ಳಿ ಮುಖ್ಯರಸ್ತೆ ಅಗಲೀಕರಣ ಸಂಬಂಧ ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಸಂಬಂಧಿಸಿದಂತೆ ಕೂಡ ಸಚಿವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಯಿತು.

























































