ಬೆಂಗಳೂರು: ಹಿರಿಯ ನಾಯಕ, ಅಪ್ರತಿಮ ಸಂಘಟಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ನಾಯಕರನ್ನು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿರುವ ಬೆಳವಣಿಗೆ ಬಗ್ಗೆ ಬಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಸದೀಯ ಮಂಡಳಿಗೆ ಬಿಎಸ್‌ವೈ ಹಾಗೂ ಬಿ.ಎಲ್.ಸಂತೋಷ್ ನೇಮಕವಾಗಿರುವ ವಿಚಾರ ವಯಕ್ತಿಕವಾಗಿ ನನಗೆ ಅತ್ಯಂತ ಖುಷಿ ನೀಡಿದ್ದು ಅವರಿಂದ ಮಾರ್ಗದರ್ಶನ ಪಡೆಯಲು ಉತ್ಸುಕನಾಗಿ ಎದುರು ನೋಡುತ್ತಿದ್ದೇನೆ ಎಂದು ರವಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷವನ್ನು ಚುನಾವಣೆಗೆ ಸಿದ್ಧಪಡಿಸುವ ಮಹತ್ಕಾರ್ಯ ಯಡಿಯೂರಪ್ಪನಂಥ ಧುರೀಣರ ಹೆಗಲಿಗೇರಿರುವುದು ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಶ್ರಮವರಿಯದ ಸೇನಾನಿಯಾಗಿ ಪಕ್ಷಕ್ಕಾಗಿ ಅಂದಿಗೂ-ಇಂದಿಗೂ ಸೇವೆ ಸಲ್ಲಿಸುತ್ತಿರುವ ಯಡಿಯೂರಪ್ಪನವರ ನಾಯಕತ್ವ ಗುಣ ಹಾಗೂ ಅನುಭವ ಪಕ್ಷದ ಪಾಲಿಗೆ ಅತಿದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.


























































