ಬೆಂಗಳೂರು: ಮುಂಗಾರು ಹಂಗಾಮು ಪ್ರಾರಂಭವಾಗಿದೆ. ಕೆಲವೆಡೆ ರಸಗೊಬ್ಬರ ಕೊರತೆ ಇದೆ ಅಂತ ಸುದ್ದಿಯಾಗಿದೆ. ಆ ರೀತಿ ಯಾವುದೇ ಕೊರತೆ ಇಲ್ಲ ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಲು ಈ ರೀತಿ ವಿಚಾರ ಹರಿದಾಡಿರಬಹುದು. ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ವಿವರಿಸಿದರು.
7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ನೀಡಲಾಗಿದೆ. 9,85,000 ಮೆಟ್ರಿಕ್ ಟನ್ ರಸ ಗೊಬ್ಬರ ಪ್ರಸ್ತುತ ಇದೆ. DAP ಗೊಬ್ಬರ, MOP, Complex, ಯೂರಿಯಾ ಸೇರಿದಂತೆ ಅಗತ್ಯ ರಸಗೊಬ್ಬರಗಳೆಲ್ಲವೂ ಸರಬರಾಜಾಗುತ್ತಿವೆ. ಕೇಂದ್ರ 3,60,000 ಮೆಟ್ರಿಕ್ ಟನ್ ಹಂಚಿಕೆ ಮಾಡಿದೆ ಎಂದು ಅವರು ತಿಳಿಸಿದರು. ರೈತರಿಗೆ ಗೊಬ್ಬರದಲ್ಲಿ ಸಬ್ಸಿಡಿ ಕೂಡ ನೀಡಲಾಗುತ್ತಾ ಇದೆ. ಮೊನ್ನೆ ಕೂಡ ಪ್ರಧಾನಿಯವರು ಸಬ್ಸಿಡಿ ದರ ನೀಡಿದ್ದಾರೆ. ಬಿತ್ತನೆ ಬೀಜದ ಕೊರತೆಯೂ ಇಲ್ಲ. ರಾಜ್ಯದಾದ್ಯಂತ ನಿಗದಿತ ಬೇಡಿಕೆಗಿಂತ ಹೆಚ್ಚು ಬಿತ್ತನೆ ಬೀಜ ದಾಸ್ತಾನಿದ್ದು ರೈತರು ಈ ವಿಚಾರದಲ್ಲಿ ಆತಂಕ ಪಡಬೇಕಿಲ್ಲ ಎಂದು ಅವರು ತಿಳಿಸಿದರು.
ಈವರೆಗೂ 2,30,000 ರೈತರಿಗೆ ನೇರ ಸೌಲಭ್ಯ ವರ್ಗಾವಣೆ (DBT) ಮೂಲಕ ಪರಿಹಾರ ನೀಡಲಾಗಿದೆ. ಕಾಂಗ್ರೆಸಿನ ಮುಖಂಡರು ಮತ್ತು ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲೇ ನಿರತರಾಗಿದ್ದರು. ಅವರು ಕೆಂಪಯ್ಯರನ್ನು ಇಟ್ಟುಕೊಂಡು ಏನೆಲ್ಲಾ ಮಾಡಿದ್ರು. ಸ್ಟೀಲ್ ಬ್ರಿಡ್ಜ್ ಹಗರಣ ಎಲ್ಲಿಗೆ ಬಂದಿತ್ತು, ಯಾಕೆ ನಿಂತಿತು ಎಂದು ಅವರು ಪಶ್ನಿಸಿದರು.
ಭ್ರಷ್ಟಾಚಾರ ತಡೆ ಕಾಯ್ದೆಯ ಉದ್ದೇಶವೇ ಭ್ರಷ್ಟಾಚಾರವನ್ನು ನಿಯಂತ್ರಿಸುವ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್ ನವರು ಆಪಾದನೆ ಬಿಟ್ರೆ ಬೇರೆನೂ ಹೇಳಿಲ್ಲ. ಪತ್ರಿಕೆಯಲ್ಲಿ ಹೆಸರು ಬರಬೇಕು ಎಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ನವರು ಸುಳ್ಳು ಆರೋಪವನ್ನು ಬಿಜೆಪಿ ಮೇಲೆ, ಸಚಿವರ ಮೇಲೆ ಹೊರಿಸುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜನರು ತೀರ್ಪು ಬಿಜೆಪಿ ಪರವಾಗಿ ಮತ ನೀಡಲಿದ್ದಾರೆ. ಕಾಂಗ್ರೆಸ್ಸಿನ ಸುಳ್ಳು ಆರೋಪಗಳಿಗೆ ಅವರು ಬೆಲೆ ಕೊಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ನುಡಿದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ “ಯತ್ನಾಳ್ ಕೂಡ ಸಾಕ್ಷಾಧಾರ ನೀಡಬೇಕು. ಚಪಲಕ್ಕೆ ಯಾರ್ಯಾರು ಏನೇನೋ ಹೇಳುತ್ತಾ ಇರುತ್ತಾರೆ. ಪಕ್ಷದಲ್ಲಿ ಯಾರ್ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ವಲಸೆ ಬಂದಿರೋರು ನಾವ್ಯಾರು ಬೇಸರವಾಗಿಲ್ಲ. ಬಿಜೆಪಿಗೆ ಬಂದ ಮೇಲೆ ಪಕ್ಷದ ಶಿಸ್ತನ್ನ ನೋಡಿದ್ದೇನೆ. ಪಕ್ಷ ಸಂಘಟನೆ, ಬೂತ್ ಮಟ್ಟದ ಕಾರ್ಯಕ್ರಮ ಎಲ್ಲವನ್ನೂ ನೋಡಿ ಕಲಿತಿದ್ದೇವೆ. ಆದರೆ ಅದೆಲ್ಲವೂ ಅಲ್ಲಿ (ಕಾಂಗ್ರೆಸ್ನಲ್ಲಿ) ಇರಲಿಲ್ಲ. ಅಸಮಾಧಾನ ಅನ್ನೋದು ಸುಳ್ಳು” ಎಂದು ಬಿ.ಸಿ. ಪಾಟೀಲ್ ಸ್ಪಷ್ಟ ಪಡಿಸಿದರು.