ಮೈಸೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ದ ಬಿಜೆಪಿ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ವಿಶ್ವನಾಥ್, ಸಾಫ್ಟ್ ಆಗಿ ಆಡಳಿತ ಮಾಡುತ್ತಿದ್ದೇನೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಇದು ಒಬ್ಬ ಮುಖ್ಯಮಂತ್ರಿ ನೀಡುವ ಹೇಳಿಕೆಯಲ್ಲ ಎಂದ ಅವರು, ಆಡಳಿತದಲ್ಲಿ ಸಾಫ್ಟ್ ಅಥವಾ ಹಾರ್ಡ್ ಅಂತೇನಿಲ್ಲ. ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕಷ್ಟೇ ಎಂದರು. ನಿಮ್ಮ ಹಾರ್ಡ್ ನೆಪನನ್ನು ಹಗರಣ ಮಾಡಿದವರ ಮೇಲೆ ಬಳಸಿ. ಶಾಂತಿ ಕದಡುವವರ ವಿರುದ್ದ ಬಳಸಿ ಎಂದು ಬಸವರಾಜ್ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡ ವಿಶ್ವನಾಥ್, ಸರ್ಕಾರಕ್ಕೆ ಪ್ರತಿದಿನ ಕೆಟ್ಟ ಹೆಸರು ಬರುತ್ತಿದೆ. ಪ್ರತಿದಿನ ಒಂದಲ್ಲ ಒಂದು ಹಗರಣ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದರು.
ನಾಯಕತ್ವ ಬದಲಾವಣೆ: ಸಂತೋಷ್ ಅಭಿಪ್ರಾಯಕ್ಕೆ ಸಹಮತ
ಹೊಸ ಮುಖಕ್ಕೆ ಮಣೆ ಹಾಕುತ್ತೇವೆಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸಂತೋಷ್ ಅವರು ಸರಿಯಾಗಿಯೇ ಹೇಳಿದ್ದಾರೆ ಎಂದರು. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕೆಂದು ನಾಗ್ಪುರದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದನ್ನು ಈಗ ಸ್ಟಾರ್ಟ್ ಮಾಡಬೇಕೆಂದು ಹೇಳಿದರು.