ಮಂಗಳೂರು: ಸರ್ಕಾರ ಮತ್ತು ಪಕ್ಷ ರಥದ ಎರಡು ಗಾಲಿಗಳಂತೆ ಕರ್ನಾಟಕದ ಅಭಿವೃದ್ಧಿಯ ರಥವನ್ನು ಎಳೆಯಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆರೆ ನೀಡಿದ್ದಾರೆ.
ಬಂಟ್ವಾಳದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಪ್ರಾತಿನಿಧ್ಯ ಪ್ರಜಾಪ್ರಭುತ್ವ. ಭಾ.ಜ.ಪ ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೂ ಹಂತ ಹಂತವಾಗಿ ಬೆಳೆದಿರುವ ಪಕ್ಷ ಇಂದು ದೇಶದಲ್ಲಿ ಅತಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿದೆ. ಇದರ ಅರ್ಥ ಅತಿ ಹೆಚ್ಚು ಜನಮನ್ನಣೆಯನ್ನು ಪಡೆದಿರುವ ಪಕ್ಷ ಭಾ.ಜ.ಪ. ವಿಶ್ವದ ಅತಿ ಹೆಚ್ಚು ಕಾರ್ಯಕ್ರರ್ತರು ನೋಂದಣಿಯಾಗಿರುವ, ಸಂಘಟನೆಯಾಗಿರುವ, ಕೇಡರ್ ಆಧಾರಿತ, ಚೀನಾದ ಕಮ್ಯುನಿಸ್ಟರ ಸದಸ್ಯತ್ವವನ್ನು ಮೀರಿ ಬೆಳೆದಿರುವ ಪಕ್ಷ. ಇದು ಭಾ.ಜ.ಪ ದ ಅಂತರ್ಗತ ಶಕ್ತಿ. ಇದರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪಕ್ಷದ ಆಧಾರ ಸ್ಥಂಭವಾದ ಈ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಅಧಿಕಾರಸ್ಥರು ಕೆಲಸ ಮಾಡಬೇಕಿದೆ ಎಂದರು.
ಭಾಜಪದ ಮಟ್ಟಿಗೆ ಹೇಳಬೇಕೆಂದರೆ, ಭಾ.ಜ.ಪ ಕರಾವಳಿಯಲ್ಲಿ ಇಂದು ಚಿಂತಿಸಿದ್ದು, ಕರ್ನಾಟಕದಲ್ಲಿ ನಾಳೆ ಆಗುತ್ತದೆ. ಈ ಭಾಗದ ಸಕಲ ಅಭಿವೃದ್ಧಿಗೆ ಅತಿ ಹೆಚ್ಚು ಒತ್ತು ಮತ್ತು ಪ್ರಾಶಸ್ತ್ಯವನ್ನು ನೀಡಿ ಕೆಲಸ ಮಾಡುತ್ತೇವೆ ಎಂದರು.
ಉಡುಪಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಾಗಿನಿಂದಲೂ ನನ್ನ ಮೇಲೆ ತೋರಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದ ಸಿಎಂ, ಸರ್ಕಾರದ ಮುಖ್ಯಸ್ಥನಾಗಿ ಈ ಭಾಗದ ಸಮಗ್ರ ಅಭಿವೃದ್ಧಿ ಮತ್ತು ಇಲ್ಲಿನ ಹಲವಾರು ವರ್ಷಗಳಿಂದ ಇರುವ ಸಮಸ್ಯೆಗಳನು ಬಗೆಹರಿಸುವ ಬಹಳ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇದೆ ಎಂಬ ಅರಿವಿನಿಂದ ನಮ್ಮ ಕೆಲಸಗಳು ಇರಲಿವೆ ಎಂದರು.
ಸುಮಾರು 100 ವರ್ಷಗಳಷ್ಟು ಪಕ್ಷವಾಗಿರುವ ಕಾಂಗ್ರೆಸ್ ಗೆ ವಯಸ್ಸಾಯಿತೋ ಅಥವಾ ಏನಾದರೂ ಆಂತರಿಕವಾಗಿ ಬಹಳ ತೊಂದರೆ ಅನುಭವಿಸುತ್ತಿದೆಯೋ ತಿಳಿಯದು. ಪ್ರತಿದಿನವೂ ಅದು ಕ್ಷೀಣಿಸುತ್ತಿದೆ. ಜನರಿಂದ ಸಂಪೂರ್ಣ ವಿಮುಖವಾಗಿದೆ. ಜನರ ಭಾವನೆಗಳಿಂದಲೂ ವಿಮುಖವಾಗಿದೆ. ಅವರ ರಾಷ್ಟ್ರೀಯ ನಾಯಕರು ಮಾತನಾಡುವ ರೀತಿ, ಸ್ಥಳೀಯ ರಾಜ್ಯಮಟ್ಟದ ನಾಯಕರು ಮಾತನಾಡುವ ಶೈಲಿ ನಿಜವಾಗಿಯೂ ಶತಮಾನವನ್ನು ಆಚರಿಸಿರುವ ರಾಷ್ಟ್ರೀಯ ಪಕ್ಷಕ್ಕೆ ಅದ್ಯಾವುದೂ ಶೊಭೆ ತರುವಂತಿಲ್ಲ. ಜನ ಬಹಳ ಸೂಕ್ಷಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಭಾ.ಜ.ಪ ಕಾರ್ಯಕರ್ತರಿಗೆ ಇರುವ ಗೌರವ ಕಾಂಗ್ರೆಸ್ಸಿನ ನಾಯಕರಿಗೆ ಇಲ್ಲ ಎಂದರು.
ವಿರೋಧ ಪಕ್ಷದವರು ಹತಾಶರಾಗಿದ್ದಾರೆ. ಎಲ್ಲಾ ವಿಚಾರಗಳನ್ನು ತಿರುಚಿ ಹೇಳುತ್ತಿದ್ದಾರೆ. ನಾನು ಮಾತನಾಡುವುದಿಲ್ಲ ಎನ್ನುತ್ತಾರೆ. ಎಲ್ಲಾ ವಿಚಾರಗಳಿಗೂ ಸ್ಪಂದಿಸಿ ಪರಿಹಾರ ನೀಡುತ್ತಿರುವುದ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಪರಿಹಾರ ಬೇಕಾಗಿಲ್ಲ. ಸಮಸ್ಯೆಯ ಚರ್ಚೆ ಬೇಕಿಲ್ಲ. ಅದಕ್ಕೆ ಏನೋ ಹೇಳಿಕೆ ಕೊಡುವುದು ಮತ್ತೊಂದು ಹೇಳಿಕೆ ನೀಡುವುದು ಮಾಡುತ್ತಿದ್ದಾರೆ. ಇದು ಅವರ ಲೆಕ್ಕಾಚಾರ. ಅವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು, ಮತಬ್ಯಾಂಕ್ ಆಗಿಸುವುದು ರಾಜಕೀಯವಾಗಿ ಮಾಡುತ್ತಿದ್ದಾರೆ. ನಾವು ರಾಜ್ಯ ಕಟ್ಟಲು, ಸಮಾಜ ಕಟ್ಟಲು ಜನರನ್ನು ಕಟ್ಟಲು ಸರ್ಕಾರ ಮತ್ತು ಭಾ.ಜ.ಪ ಕೆಲಸ ಮಾಡುತ್ತಿದೆ. ಇದು ವ್ಯತ್ಯಾಸ. ಏನೇ ಸವಾಲು ಬರಲಿ ಅದನ್ನು ಎದುರಿಸುವ ಶಕ್ತಿ ಭಾಜಪದ ತತ್ವ, ಆದರ್ಶದಲ್ಲಿ, ನಾಯಕರಲ್ಲಿ, ಸರ್ಕಾರದಲ್ಲಿ ಮತ್ತು ಭಾಜಪದ ಕಾರ್ಯಕರ್ತರಲ್ಲಿದೆ ಎಂದರು.