ಬೆಂಗಳೂರು: ಆಶಾ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ‘ವಿಶ್ವ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಗತ್ತಿನಲ್ಲಿ ಅನೇಕ ವೃತ್ತಿಗಳಿವೆ. ಆದರೆ ವೈದ್ಯ ವೃತ್ತಿಯಲ್ಲಿ ಹೆಚ್ಚು ಧನ್ಯತಾ ಭಾವ ಮೂಡುತ್ತದೆ. ಅನುಕಂಪ, ಪ್ರೀತಿ, ವಿಶ್ವಾಸವನ್ನು ಅಳವಡಿಸಿಕೊಂಡಾಗ ಮಾತ್ರ ಇದು ಸಾಧ್ಯ ಎಂದರು.
ವೃತ್ತಿ ಬದುಕಿನಲ್ಲಿ ವೈದ್ಯರು ರಾಜಿ ಆಗಬಾರದು. ಜನರ ಮುಂದೆ ತಲೆ ತಗ್ಗಿಸುವಂತಾಗಬಾರದು. ಐಎಎಸ್, ಕೆಎಎಸ್ ಅಧಿಕಾರಿಗಳು ಎಲ್ಲ ಬಗೆಯ ಆಡಳಿತದ ಕೆಲಸವನ್ನು ಮಾಡುತ್ತಾರೆ. ಹಾಗೆಯೇ ವೈದ್ಯರು ಕೂಡ ಆಡಳಿತ ನಡೆಸಬೇಕು ಯಾವುದೇ ಆರೋಗ್ಯ ಸಂಸ್ಥೆ, ಆಸ್ಪತ್ರೆಯಲ್ಲಿ ಆಡಳಿತ ಲೋಪ ಉಂಟಾಗುವುದನ್ನು ತಡೆಯಲು ವೈದ್ಯರಿಗೆ ವಿಶೇಷ ತರಬೇತಿ ಅಗತ್ಯವಿದೆ. ಇದನ್ನು ಹಿಂದಿನ ಯಾವುದೇ ಸರ್ಕಾರ ಮಾಡಿರಲಿಲ್ಲ. ಈಗ ನಮ್ಮ ಸರ್ಕಾರ ಇದನ್ನು ಸೂಕ್ತವಾಗಿ ಮಾಡಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ನೌಕರರಿಗೆ ವೇತನ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಆರೋಗ್ಯ ಇಲಾಖೆಯ ನೌಕರರಿಗೆ ಈ ರೀತಿ ವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಕಣ್ಣಿನ ಆರೋಗ್ಯ ತಪಾಸಣೆಗಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಡವರಿಗಾಗಿ ಉಚಿತ ಡಯಾಲಿಸಿಸ್ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ ಎಂದರು.
44 ಸಾವಿರ ಆಶಾ ಕಾರ್ಯಕರ್ತೆಯರನ್ನು ಮಧ್ಯ ಕರ್ನಾಟಕ ಭಾಗದಲ್ಲಿ ಒಂದೆಡೆ ಸೇರಿಸಿ ಆರೋಗ್ಯ ದಿನಾಚರಣೆಯನ್ನು ಆಚರಿಸುವ ಉದ್ದೇಶವಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರನ್ನೂ ಕರೆತರಲಾಗುವುದು. ಹಾಗೆಯೇ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಪುನೀತ್ ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ್ದರಿಂದ ಅರಿವು ಹೆಚ್ಚಾಗಿದೆ. ಇದೇ ರೀತಿ ತಾರೆಯರ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.