ಬೆಂಗಳೂರು: ಹಲವಾರು ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿರುವ ರಾಜ್ಯ ಬಿಜೆಪಿಯಲ್ಲಿ ಇದೀಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ನಡೆ ತೀವ್ರ ಕುತೂಕಲಕ್ಕೆ ಕಾರಣವಾಗಿದೆ. ಇದೇ ವೇಳೆ, ತಾವು ಸಚಿವಾಕಾಂಕ್ಷಿಯಲ್ಲ, ಮಂತ್ರಿಗಿರಿಗಾಗಿ ವರಿಷ್ಠರನ್ನು ಭೇಟಿಯಾಗಿಲ್ಲ ಎಂದು ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತಿದ್ದಂತೆಯೇ ದೆಹಲಿಗೆ ದೌಡಾಯಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ತಾವು ವರಿಷ್ಠರನ್ನು ಭೇಟಿಯಾಗಿರುವ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಏನಿದು ಕುತೂಹಲ..?
ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ಚಿಂತನೆ ನಡೆಸುತ್ತಿದ್ದು, ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡದಿದ್ದರೆ ಸಂಪುಟಕ್ಕೆ ಸರ್ಜರಿ ಮಾಡುವ ಸಾಧ್ಯತೆಗಳ ಬಗ್ಗೆ ಬಿಜೆಪಿಯಲ್ಲಿ ಮಾಹಿತಿ ಹರಿದಾಡಿದೆ. ಅದರಲ್ಲೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಹಾಗೂ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿರುವ ವಲಸಿಗರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆಂಬ ಮಾತುಗಳೂ ಹರಿದಾಡುತ್ತಿವೆ. ಈ ಸಂದರ್ಭದಲ್ಲೇ ಯುವ ನಾಯಕ ಬಿ.ವೈ.ವಿಜಯೇಂದ್ರ ಅವರು ಹೈಕಮಾಂಡ್ ಪ್ರಮುಖರನ್ನು ಭೇಟಿಯಾಗಿರುವ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತಂತೆ, ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಬಿ.ವೈ.ವಿಜಯೇಂದ್ರ, ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ವೇಳೆ ನಾನು ಸಚಿವಾಕಾಂಕ್ಷಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಸಚಿವ ಸ್ಥಾನಕ್ಕೆ ಕೊಡಿಸಲು ಒತ್ತಡ ಮಾಡುತ್ತಿದ್ದಾರೆ ಎನ್ನುವುದೂ ಸತ್ಯಕ್ಕೆ ದೂರವಾದದ್ದು ಎಂದೂ ವಿಜಯೇಂದ್ರ ಹೇಳಿದರು.
ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಆಗಿದ್ದು ವೈಯಕ್ತಿಕ ಕಾರಣಕ್ಕಾಗಿ ಎಂದ ಅವರು, ಸಂಘಟನೆಯ ಕುರಿತು ಚರ್ಚೆ ಮಾಡಿದ್ದೇವೆಯೇ ಹೊರತು ಯಾವುದೇ ಸ್ಥಾನಮಾನಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.