ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭುಗಿಲೆದ್ದ ಹಿಜಬ್ ವಿವಾದ ರಾಜ್ಯವ್ಯಾಪಿ ಆವರಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಈ ವಿವಾದಕ್ಕೆ ಬ್ರೇಕ್ ಹಾಕಿದೆ. ಸನಾನತೆಯ ಮಂತ್ರ ಪಠಿಸುತ್ತಾ ನೂತನ ಸಮವಸ್ತ್ರ ಸಂಹಿತೆಯನ್ನು ಘೋಷಿಸಿದೆ. ಈ ಸಂಬಂಧ ಆದೇಶವೊಂದನ್ನು ಹೊರಡಿಸಿದೆ. ಎಲ್ಲಾ ಸರಕಾರಿ, ಖಾಸಗಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆಯು ಶನಿವಾರ ಸಂಜೆ ಆದೇಶ ಪ್ರಕಟಿಸಿದೆ.
ವಿವಿಧ ರಾಜ್ಯಗಳ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ಈ ಆದೇಶವನ್ನು ಹೊರಡಿಸಿರುವುದರಿಂದ ಇದಕ್ಕೆ ಭಾರೀ ಮಹತ್ವ ಬಂದಿದೆ. ಶಾಲಾ ಅಭಿವೃದ್ಧಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿ ಮಾಡಿದ ಸಮವಸ್ತ್ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರವನ್ನೇ ಧರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಮಂಡಳಿ ಮೇಲ್ವಿಚಾರಣಾ ಸಮಿತಿ ನಿಗದಿಪಡಿಸಿದ ಸಮವಸ್ತ್ರವನ್ನೇ ಧರಿಸಬೇಕು. ಒಂದು ವೇಳೆ, ಸಮವಸ್ತ್ರವನ್ನು ನಿಗದಿ ಪಡಿಸದೇ ಇದ್ದಲ್ಲಿ, ಅಂತಹಾ ಶಿಕ್ಷಣಸಂಸ್ಥೆಗಳಲ್ಲಿ ಸರ್ವಜನಿಕ ಸುವ್ಯವಸ್ಥೆಗೆ ದಕ್ಕೆಯಾಗದ ರೀತ್ಯಾ ಉಡುಪುಗಳನ್ನು ಧರಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ .
ಹಿಜಾಬ್ ಧರಿಸದೇ ಶಾಲೆಗೆ ಬರುವಂತೆ ನಿರ್ದೇಶಿಸುವುದು ಸಂವಿಧಾನದ 25 ನೇ ಅನುಚ್ಛೇದದ ಉಲ್ಲಂಘನೆಯಾಗುವುದಿಲ್ಲ ಎಂದು ಎಂದಿರುವ ಸರ್ಕಾರ, ಸಮವಸ್ತ್ರವನ್ನು ಕಡ್ಡಾಯದ ಅನಿವಾರ್ಯತೆಗೆ ವಿವಿಧ ಕಾರಣಗಳನ್ನೂ ಮುಂದಿಟ್ಟಿದೆ.