ಶಿವಮೊಗ್ಗ, : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರ ಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಹಿಂದೆ ಕಾರಾಗೃಹಕ್ಕೂ ಭೇಟಿ ನೀಡಿದ್ದೆ ಹಾಗೂ ಅಲ್ಲಿನ ಸಿಬ್ಬಂದಿಗಳು ಹಾಗೂ ಕೈದಿಗಳ ಜೊತೆಗೂ ಸಂವಾದ ನಡೆಸಿದ್ದೆ. ಕಾರಾಗೃಹಗಳು ಅಪರಾಧ ಕೃತ್ಯ ನಡೆಸುವ ಕೇಂದ್ರ ಸ್ಥಾನಗಳು ಆಗಬಾರದು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ ಅದರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ನೀಡಿದ್ದೇನೆ. ವರದಿ ಸಲ್ಲಿಕೆ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದವರು ತಿಳಿಸಿದರು.