ಮಂಗಳೂರು: ತುಳು ಸಂಸ್ಕೃತಿ, ಪರಂಪರೆ, ನಾಡು-ನುಡಿ-ವೈಭವ ಅನಾವರಣ ಮಾಡುತ್ತಾ ಕರಾವಳಿ ಜನರಲ್ಲಿನ ಭಾಷಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ‘ಪೂವರಿ’ ಪತ್ರಿಕಾ ಬಳಗದ್ದು ಕ್ರಿಯಾಶೀಲ ನಡೆ. ಈ ಪತ್ರಿಕೆ ಇದೀಗ ಮತ್ತೊಂದು ಹೊಸ ಪ್ರಯತ್ನ ಮೂಲಕ ನಾಡಿನ ಗಮನಸೆಳೆದಿದೆ.
ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ಏಕೈಕ ತುಳು ಮಾಸಿಕ ‘ಪೂವರಿ’ ಎಂಟನೇ ಸಂವತ್ಸರಕ್ಕೆ ಪಾದರ್ಪಣೆಗೈಯುತ್ತಿದೆ. ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ‘ಅಂಚೆ ಕಾರ್ಡ್ ತುಳು ಬರಹ’ದ ಪಂಥಾಹ್ವಾನ ನೀಡಿದೆ.
ಏನಿದು ‘ಪೂವರಿ ಪಂಥಾಹ್ವಾನ’?
ತುಳು ಭಾಷೆಯ ಏಕೈಕ ಮಾಸಿಕ ‘ಪೂವರಿ’ಯು ತುಳುನಾಡಿನ ತುಳು ನುಡಿ ಹಬ್ಬಗಳಂತಹಾ ಸಂದರ್ಭಗಳಲ್ಲಿ ಮುಂಚೂಣಿ ಕೈಂಕರ್ಯ ನಡೆಸುತ್ತಿರುತ್ತದೆ. ಇದೀಗ ತನ್ನದೇ 8ನೇ ವಾರ್ಷಿಕೋತ್ಸವವನ್ನೂ ತುಳು ನುಡಿಗಾಗಿ ಮುಡಿಪಾಗಿಟ್ಟಿದೆ. ಪೋಸ್ಟ್ ಕಾರ್ಡ್‌ನಲ್ಲಿ ತುಳು ಬರಹವನ್ನು ಈ ಪತ್ರಿಕಾ ಬಳಗ ಆಹ್ವಾನಿಸಿದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ ಬರಹಗಳಿಗೆ ಬಹುಮಾನವನ್ನೂ ನೀಡಲಿದೆ. ತುಳು ಸಾಹಿತ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಪೂವರಿ’ ಪ್ರಯತ್ನಕ್ಕೆ ತುಳುನಾಡಿನ ಸಾಹಿತ್ಯಾಸಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ
- ಅಂಚೆಕಾರ್ಡಲ್ಲಿ ಸಣ್ಣಕಥೆ, ಕವಿತೆ, ಹನಿಗವನಗಳು ಸೇರಿದಂತೆ ಯಾವುದೇ ಪ್ರಕಾರದ ತುಳು ಬರಹಗಳನ್ನು ಬರೆಯಬಹುದು.
- ಸ್ಪರ್ಧೆಗೆ ಬರೆಯುವ ವಿದ್ಯಾರ್ಥಿಗಳ ಬರಹಗಳು ಒಂದೇ ಕಾರ್ಡಿಗೆ ಸೀಮಿತವಾಗಿರಬೇಕು.
- ‘ಒಬ್ಬ ವಿದ್ಯಾರ್ಥಿಗೆ ಒಂದು ಬರಹ’ ಅವಕಾಶ. ಒಂದಕ್ಕಿಂತ ಹೆಚ್ಚು ಬರಹಗಳಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.
- ಅಂಚೆ ಕಾರ್ಡಲ್ಲಿ ತುಳು ಬರಹಗಳನ್ನು ಬರೆಯುವ ಸ್ಪರ್ಧೆಯಲ್ಲಿ ಗೆದ್ದ ಬರಹಗಳಿಗೆ ಪ್ರಶಸ್ತಿ ನೀಡಲಾಗುವುದು.
- ಆಯ್ಕೆಯಾದ ಬರಹಗಳನ್ನು ‘ಪೂವರಿ’ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.
- ಸ್ಪರ್ಧೆಗೆ ಬರಹಗಳನ್ನು ಕಳುಹಿಸುವ ವಿದ್ಯಾರ್ಥಿಗಳು ತಮ್ಮ ವಿಳಾಸದೊಂದಿಗೆ ತಾವು ಕಲಿಯುತ್ತಿರುವ ತರಗತಿ, ಶಾಲೆ ಅಥವಾ ಕಾಲೇಜಿನ ವಿವರಗಳನ್ನು ಬರೆಯಬೇಕು. ತರಗತಿ ಮತ್ತು ಶಾಲಾ ವಿವರವಿಲ್ಲದ ಬರಹಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದಿಲ್ಲ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಬರಹಗಳನ್ನು 2022 ಫೆಬ್ರವರಿ 15ರೊಳಗೆ ‘ಪೂವರಿ ತುಳು ಮಾಸಿಕ ಪತ್ರಿಕೆ, ಅಂಚೆ ಕಾರ್ಡ್ ಬರವುದ ಪಂತೊ ವಿಭಾಗ, ಅಂಚೆ ಪೆಟ್ಟಿಗೆ ನಂ: 28, ಪುತ್ತೂರು-574201’ ವಿಳಾಸಕ್ಕೆ ಕಳುಹಿಸಬೇಕೆಂದು ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರ್‌ಬೈಲ್ ತಿಳಿಸಿದ್ದಾರೆ.