ಬೆಂಗಳೂರು: ಸಚಿವಾಲಯದ ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾಗಿ ಹಿರಿಯ ಆಪ್ತ ಕಾರ್ಯದರ್ಶಿ ಶ್ರೀಧರ್ ಮೂರ್ತಿ ಎಸ್.ಪಂಡಿತ್ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಕಾರ್ಯಕಾರಿ ಸಭೆಯಲ್ಲಿ ಶ್ರೀಧರ್‌ಮೂರ್ತಿ ಎಸ್.ಪಂಡಿತ್ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಪ್ರಸಕ್ತ ಶ್ರೀಧರ್‌ಮೂರ್ತಿ, ಯೋಜನಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇವರ ಹಿರಿಯ ಆಪ್ತಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಘದಲ್ಲಿ ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಗ್ರೇಡ್ -1 ಗ್ರೇಡ್-2 ಆಯ್ಕೆ ಶ್ರೇಣಿ ವೃಂದದ ಆಪ್ತಕಾರ್ಯದರ್ಶಿ ಅಧಿಕಾರಿಗಳು ಸದಸ್ಯರಾಗಿದ್ದು ಸಚಿವಾಲಯದಲ್ಲಿ ಇವರ ಹಲವಾರು ಬೇಡಿಕೆಗಳಿನ್ನೂ ಈಡೇರಿಲ್ಲ. ಆಪ್ತ ಕಾರ್ಯದರ್ಶಿ ಹುದ್ದೆ ಪ್ರಮುಖವಾಗಿದ್ದು, ಮಹಿಳಾ ನೌಕರರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದಲ್ಲಿದ್ದಾರೆ. ಈ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಶ್ರಮಿಸುವುದಾಗಿ
ಶ್ರೀಧರ್‌ಮೂರ್ತಿ ತಿಳಿಸಿದ್ದಾರೆ.
ಶ್ರೀಧರ್‌ಮೂರ್ತಿ ಅವರು ಈ ಹಿಂದೆ ಆರೋಗ್ಯ,ವೈದ್ಯಕೀಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಹಾಗೂ ಯಲ್ಲಾಪುರ, ಸೊರಬ, ಕೊಪ್ಪ, ಚಳ್ಳಕೆರೆ ಸಹಿತ ವಿವಿಧೆಡೆ 20ವರ್ಷಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.