ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ ನಾನು ಕೂಡ ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ʼಜನತಾ ಜಲಧಾರೆʼ ಕಾರ್ಯಕ್ರಮದಲ್ಲಿ ರಾಜ್ಯವ್ಯಾಪಿ ಜಲ ಸಂಗ್ರಹಕ್ಕೆ ತೆರಳಲಿರುವ ʼಗಂಗಾ ರಥಯಾತ್ರೆʼಗೆ ಸಿದ್ಧಪಡಿಸಲಾಗಿದ್ದ ವಾಹನವನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ್ದು ಪಾದಯಾತ್ರೆ ಅಲ್ಲ, ಅದು ಮತಯಾತ್ರೆ ಮಾತ್ರ. ಕೇವಲ ಮುಂದಿನ ಚುನಾವಣೆಯಲ್ಲಿ ಮತ ಪಡೆಯುವ ಏಕೈಕ ಉದ್ದೇಶದಿಂದ ಆ ಪಕ್ಷ ಜನರಿಗೆ ಪಾದಯಾತ್ರೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಆ ಪಕ್ಷದ ಪ್ರತಿಪಕ್ಷ ನಾಯಕರು ಮೇಕೆದಾಟು ಯೋಜನೆ ಬಗ್ಗೆ ದಿನಕ್ಕೆ ಒಂದೊಂದು ಹಸಿಸುಳ್ಳು ಹೇಳುತ್ತಿತ್ತಾರೆ. ಇನ್ನು, ಆ ಪಕ್ಷದ ರಾಜ್ಯಾಧ್ಯಕ್ಷರು ಪ್ರಾಣ ಹೋದರೂ ಪಾದಯಾತ್ರೆ ನಿಲ್ಲಲ್ಲ ಅಂತಾರೆ. ಪಾಪ.. ನಿಮ್ಮ ಪ್ರಾಣ ಯಾಕೆ ವ್ಯರ್ಥ ಮಾಡಿಕೊಳ್ತೀರಾ? ನೀವು ಕಾವೇರಿ ಕೊಳ್ಳದ ಜನರ ಬಾವನೆಗಳ ಜತೆ ಚೆಲ್ಲಾಟ ಆಡಿಕೊಂಡು ಅವರ ಜೀವ ತೆಗೆಯಲು ಹೊರಟಿದ್ದಾರಾ. ಅಂಥ ಕೆಲಸ ಬೇಡ ಎಂದು ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.
ದೇವೇಗೌಡರ ಮೇಲೆ ನಂಬಿಕೆ ಇದ್ದರೆ ಪಾದಯಾತ್ರೆ ಯಾಕೆ?
ದೇವೇಗೌಡರು ಮಾಡಿದ ಪ್ರಯತ್ನದ ಫಲವಾಗಿ ಇಂದು ಬೆಂಗಳೂರು ಜನರಿಗೆ ಕಾವೇರಿ ನಾಲ್ಕನೆ ಹಂತದಲ್ಲಿ 9 ಟಿಎಂಸಿ ನೀರು ಸಿಕ್ಕಿದೆ. ದೇವೇಗೌಡರು ಪ್ರಧಾನಿಗಳ ಜತೆ ವಿಶ್ವಾಸ ಇಟ್ಟುಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟು ನಂಬಿಕೆ ಇದ್ದ ಮೇಲೆ ದೇವೇಗೌಡರನ್ನೇ ಪ್ರಧಾನಿ ಜತೆ ಮಾತನಾಡಿ ಎಂದು ಕಾಂಗ್ರೆಸ್ ನಾಯಕರು ಹೇಳಬಹುದಲ್ಲವೆ? ಹಾಗಿದ್ದ ಮೇಲೆ ಪಾದಯಾತ್ರೆ ಏತಕ್ಕೆ? ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಕರ್ನಾಟಕದ ನೀರಿನ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ, 1962ರಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದು ಶಾಸನಸಭೆಗೆ ಬಂದ ಅವರು ನಡೆಸಿದ ಹೋರಾಟದ ಫಲವೇ ಹಾರಂಗಿ, ಕಬಿನಿ, ಹೇಮಾವತಿ ಯೋಜನೆಗಳು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನಾತ್ಮಕ, ಆಡಳಿತ ಹಾಗೂ ತಾಂತ್ರಿಕವಾಗಿ ಅಪಾರ ಜ್ಞಾನವುಳ್ಳ ದೇವೇಗೌಡರು ಮಾಡಿರುವ ಕೆಲಸಗಳ ಬಗ್ಗೆ ಸಿದ್ದರಾಮಯ್ಯ ಅವರಿಗೇನು ಗೊತ್ತು? ಒಂದು ವೇಳೆ ನೀರಾವರಿ ವಿಷಯಗಳಲ್ಲಿ ದೇವೇಗೌಡರನ್ನು ಕಡೆಗಣಿಸಿದರೆ ರಾಜ್ಯಕ್ಕೇ ನಷ್ಟ ಎಂದರು.
ಮಾತೆತ್ತಿದರೆ ಕುಮಾರಣ್ಣ, ನಮ್ಮಣ್ಣ ಅನ್ನತ್ತಾರೆ. ಅವರು ಹೊಡೆದರೆ ಹೊಡೆಸಿಕೊಳ್ತೀನಿ ಎನ್ನುತ್ತಾರೆ. ಅಶೋಕಣ್ಣ, ಅಶ್ವತ್ಥನಾರಾಯಣ ಅಣ್ಣ ಅಂತ ಮಾತನಾಡುತ್ತಾರೆ. ನೀರಾವರಿ ವಿಷಯದಲ್ಲಿ ಇಂಥ ಡ್ರಾಮಾ ಎಲ್ಲಾ ಯಾಕೆ ಎಂದು ಡಿಕೆಶಿಗೆ ಕುಮಾರಸ್ವಾಮಿ ಅವರು ನೇರವಾಗಿ ಟಾಂಗ್ ಕೊಟ್ಟರು.
DPR ಬಗ್ಗೆ ಸಿದ್ದರಾಮಯ್ಯ ಹಸಿಸುಳ್ಳು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರ ಇದ್ದಾಗಲೇ DPR ಮಾಡಿ ಸಲ್ಲಿಕೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು 2017ರಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ ಸಲ್ಲಿಕೆ ಮಾಡಿದ್ದು ಕೇವಲ ಯೋಜನೆ PFR (ಪ್ರೈಮರಿ ಫೀಸಬಲ್ ರಿಪೋರ್ಟ್) ಮಾತ್ರ. ಅದು ಅಲ್ಲಿಗೇ ನಿಂತಿತು. 2018ರಲ್ಲಿ ನಾನು ಸಿಎಂ ಆದ ಕೂಡಲೇ ಇನ್ನೊಮ್ಮೆ PFR ಸಲ್ಲಿಸಿ DPR ಸಿದ್ಧಪಡಿಸಲು ಅನುಮೋದನೆ ಪಡೆದುಕೊಳ್ಳಲಾಯಿತು. ಅದರ ಬೆನ್ನಲ್ಲೇ ಆಗ ಕೇಂದ್ರದ ಭೂ ಸಾರಿಗೆ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಅವರು ಕೂಡಲೇ DPR ಸಲ್ಲಿಸಿ ಎಂದರು. ಹಲವು ಬಾರಿ ನಾನು ಗಡ್ಕರಿ ಅವರನ್ನು ಭೇಟಿ ಮಾಡಿದ್ದೆ. ನಾನು ಅಧಿಕಾರದಲ್ಲಿದ್ದ 14 ತಿಂಗಳಲ್ಲಿ 11 ಸಭೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.