ಮಂಗಳೂರು: ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆ ಚುನಾವಣೆಯಲಿ ಬಿಜೆಪಿಗೆ ನಿರಾಸೆಯಾಗಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ಜಿಲ್ಲೆಯಲ್ಲಿ ಕಮಲ ಪಕ್ಷ ಕಮಾಲ್ ಪ್ರದರ್ಶಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಅಧಿಕಾರ ಉಳಿಸಿಕೊಂಡಿರುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಸ ಹಂಚಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಒಟ್ಟಾರೆ ರಾಜ್ಯದ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ವಿಶ್ಲೇಷಿಸಿದ್ದಾರೆ.
ಈ ಚುನಾವಣೆ ಸ್ಥಳೀಯವಾದ ಕಾರಣ ಅಭ್ಯರ್ಥಿಗಳು, ವಿಷಯಗಳು ಸ್ಥಳೀಯವಾಗಿರುತ್ತೆ. ಹಾಗಾಗಿ ಇದು ಸ್ಥಳೀಯವಾಗಿ ಸಂಬಂಧಿಸಿದ ಚುನಾವಣೆ. ಒಬ್ಬ ಪಕ್ಷೇತರ ನಿಂತರೂ ಓಟುಗಳು ವ್ಯತ್ಯಾಸವಾಗುತ್ತೆ, ಫಲಿತಾಂಶ ವಿರುದ್ದ ಬರುತ್ತೆ. ಆದರೂ ಉತ್ತಮವಾದ ಫಲಿತಾಂಶ ಬಿಜೆಪಿಗೆ ಸಿಕ್ಕಿದೆ ಎಂದವರು ಹೇಳಿದ್ದಾರೆ.
ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಕೆಲವೆಡೆ ಈ ಬಾರಿ ಗೆದ್ದಿದ್ದೇವೆ ಎಂದ ಅವರು, ಈ ಫಲಿತಾಂಶ ಖಂಡಿತವಾಗಿಯೂ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಅಲ್ಲ. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್‌ಗಳು ಯಾವುದೇ ಚುನಾವಣೆಯ ದಿಕ್ಸೂಚಿ ಆಗಲ್ಲ ಎಂದ ನಳಿನ್ ಕುಮಾರ್, ಇದರಲ್ಲಿ ಲೋಕಲ್ ಸಮಸ್ಯೆ, ಲೋಕಲ್ ವಿಷಯ, ಲೋಕಲ್ ಅಭ್ಯರ್ಥಿಗಳಿರುತ್ತಾರೆ. ಇದು ಅಲ್ಲಲ್ಲೇ ನಡೆಯುವ ಚುನಾವಣೆ, ಯಾವುದೇ ಚುನಾವಣೆ ದಿಕ್ಸೂಚಿ ಅಲ್ಲ. ಆದರೂ ಬಿಜೆಪಿ ಒಳ್ಳೆಯ ಫಲಿತಾಂಶ ಕೊಟ್ಟಿದೆ ಅಂತ ಅನಿಸ್ತಿದೆ ಎಂದರು.