ಬೆಂಗಳೂರು: ಇಸ್ರೋ ನಮ್ಮ ರಾಜ್ಯದ ಹೆಮ್ಮೆ ಮತ್ತು ಗೌರವದ ವಿಚಾರ. ಅದನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಮಾನವಸಹಿತ ಗಗನಯಾನ ಯೋಜನೆಯನ್ನು ಗುಜರಾತಿ ಸ್ಥಳಾಂತರ ಮಾಡಬಾರದು. ಅದು ಬೆಂಗಳೂರಿನಲ್ಲೇ ನಡೆಯಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಅಥವಾ ಕಾಂಗ್ರೆಸ್ ಪಕ್ಷದ ವಿಚಾರವಲ್ಲ. ಇಡೀ ರಾಜ್ಯದ ವಿಚಾರ. ಇದರ ವಿರುದ್ಧ ಬೇರೆ ಪಕ್ಷಗಳು, ಸಂಘ ಸಂಸ್ಥೆಗಳು, ಕನ್ನಡ ಸಂಘಟನೆಗಳು ಹೋರಾಟ ಮಾಡಬೇಕು ಎಂದರು.
ಕರ್ನಾಟಕ ಕೇವಲ ಐಟಿ ಹಬ್ ಅಲ್ಲ, ಇದು ತಂತ್ರಜ್ಞಾನ, ಜ್ಞಾನದ ಹಬ್. ಹಿರಿಯರು ಬೆಂಗಳೂರಿನಲ್ಲಿ ಇಸ್ರೋ ಸ್ಥಾಪಿಸಿದ್ದಾರೆ. ಮಾನವಸಹಿತ ಗಗನಯಾನ ಯೋಜನೆಗೆ ಕಾರ್ಯ ಮುಂದುವರಿಸಲು ತಡೆಯಾಜ್ಞೆ ನೀಡಲಾಗಿದೆ. ಇದನ್ನು ಗುಜರಾತಿಗೆ ಸ್ಥಳಾಂತರ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ನಾವು ಇದರ ವಿರುದ್ಧ ಧ್ವನಿ ಎತ್ತಿದ ಮೇಲೆ ನಿನ್ನೆ ಕೆ. ಶಿವನ್ ಅವರು ಸರ್ಕಾರದ ಪರವಾಗಿ ಮಾತನಾಡಿದ್ದಾರೆ. ಭಾರತದಲ್ಲಿ ಎಲ್ಲಿ ಕೆಲಸ ಮಾಡಿದರೂ ಒಂದೇ ಎಂದು ಹೇಳಿದ್ದಾರೆ. ಅವರು ಸರ್ಕಾರದ ನಿರ್ದೇಶನದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ 15 ಸಾವಿರ ವಿಜ್ಞಾನಿಗಳು ಇದ್ದಾರೆ. ಈ ಯೋಜನೆ ವಿಚಾರವಾಗಿ ನನಗೆ ಆಂತರಿಕವಾಗಿ ಮಾಹಿತಿ ಸಿಕ್ಕಿದೆ. ಈ ಯೋಜನೆ ಬೆಂಗಳೂರಿನಲ್ಲಿ ನಡೆಯಬೇಕು. ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ರಾಜ್ಯದಿಂದ ಆಯ್ಕೆಯಾದ 25 ಸಂಸದರಿದ್ದಾರೆ. 12 ರಾಜ್ಯಸಭಾ ಸದಸ್ಯರಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಹೋಗಿ ಪ್ರಧಾನಿ ಅವರನ್ನು ಭೇಟಿ ಮಾಡಿ ಈ ಯೋಜನೆ ಸ್ಥಳಾಂತರ ಮಾಡಲು ಅವಕಾಶ ನೀಡಬೇಡಿ. ಇದಕ್ಕೆ ಅವಕಾಶ ಕೊಟ್ಟರೆ ನೀವೇ ನಮ್ಮ ರಾಜ್ಯದ ಮಾನ ಹರಾಜು ಹಾಕಿದಂತೆ. ಹೀಗಾಗಿ ಎಚ್ಚರಿಕೆಯಿಂದ ನಡೆದುಕೊಳ್ಳಿ. ಇದು ನಮ್ಮ ಮಕ್ಕಳ ಭವಿಷ್ಯ ಎಂದು ಹೇಳಲಿ ಎಂದವರು ಹೇಳಿದರು.
ಎತ್ತಿನಗಾಡಿ, ಸೈಕಲ್ ಮೇಲೆ ರಾಕೆಟ್ ಹೊತ್ತುಕೊಂಡು ಹೋಗಿ ಈ ಸಂಸ್ಥೆ ಕಟ್ಟಿ ಬೆಳೆಸಲಾಗಿದೆ. ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಶ್ರಮಿಸಿ ಇಸ್ರೋ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದಿರುವ ಡಿಕೆಶಿ, ಇಸ್ರೋ ಯೋಜನೆ ಸ್ಥಳಾಂತರ ವಿರುದ್ಧ ರಾಜ್ಯದ ವಿದ್ಯಾರ್ಥಿ ಘಟಕ ಇಂದು ಸಾಂಕೇತಿಕವಾಗಿ ಪ್ರತಿಭಟನೆಗೆ ಮಾಡುತ್ತಿದೆ. ಈ ಯೋಜನೆ ಸ್ಥಳಾಂತರ ಪ್ರಯತ್ನ ಮುಂದುವರಿಸಿದರೆ ರಾಜ್ಯದೆಲ್ಲೆಡೆ ಈ ಹೋರಾಟ ನಡೆಯಲಿದೆ. ನಮ್ಮ ರಾಜ್ಯದ ನೆಲ, ವಿಜ್ಞಾನಿಗಳ ಗೌರವ ರಕ್ಷಿಸಲು ನಮ್ಮ ಹೋರಾಟ ಮುಂದುವರಿಯಲಿದೆ. ನಾನು ಈ ಹೋರಾಟದಲ್ಲಿ ಇವರ ಬೆಂಬಲಕ್ಕೆ ನಿಲ್ಲಲು ನಾನೇ ಇಲ್ಲಿಗೆ ಬಂದಿದ್ದೇನೆ ಎಂದರು.
ಈ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಧಮಕಿ ಹಾಕುತ್ತಿದ್ದಾರೆ. ನಾವು ದೇಶ ಹಾಗೂ ರಾಜ್ಯದ ಹಿತಕ್ಕಾಗಿ ಬಂಧನಕ್ಕೆಲ್ಲ ಜಗ್ಗುವುದಿಲ್ಲ. ರಾಜ್ಯದ ಹಿರಿಮೆ, ಸ್ವಾಭಿಮಾನ ನಮಗೆ ಮುಖ್ಯ. ಈ ಯೋಜನೆ ಸ್ಥಳಾಂತರದ ಹುನ್ನಾರವನ್ನು ಮಾಧ್ಯಮಗಳು ಬಯಲು ಮಾಡಬೇಕು. ಬೇಕಾದರೆ ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.
ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿ ಮತ ಕೇಳುತ್ತಿರುವ ವಿಚಾರವಾಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ದೂರು ನೀಡಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಅವರನ್ನೇ ಪ್ರಶ್ನೆ ಕೇಳಬೇಕು. ಈ ರೀತಿ ಬೆಳಗಾವಿ ಹಾಗೂ ಇತರೆ ಭಾಗಗಳಲ್ಲಿ ನಡೆಯುತ್ತಿದ್ದು, ಆಡಳಿತ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದೂ ಡಿಕೆಶಿ ದೂರಿದರು.
ಎಲ್ಲ ರೌಡಿಗಳು ವಿಶ್ವನಾಥ್ ಜತೆಗೇ ಇದ್ದಾರೆ
ವಿಶ್ವನಾಥ್ ಅವರ ದೂರಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಗೋಪಾಲಕೃಷ್ಣ ಅವರ ವಿಚಾರಣೆ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೂ ಈ ವಿಚಾರ ಗೊತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಬೆದರಿಸಲು ಈ ರೀತಿ ಮಾಡಲಾಗಿದೆ. ತಪ್ಪು ಮಾಡಿದವರನ್ನು ವಿಚಾರಣೆ ಮಾಡಲಿ. ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ತಪ್ಪು ಮಾಡಿದವರನ್ನು ನಾವು ರಕ್ಷಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಪ್ರಬಲವಾಗಿ ಎದುರಿಸುವವರಿಗೆ ಈ ರೀತಿ ಒತ್ತಡ ಹಾಕಲಾಗುತ್ತಿದೆ. ಬೆಂಗಳೂರಿನ ಎಲ್ಲ ರೌಡಿಗಳು ಅವರ ವಿಶ್ವನಾಥ್ ಜತೆಗೆ ಇದ್ದಾರೆ’ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಅವರ ವಿರುದ್ಧ ಎಸ್.ಟಿ. ಸೋಮಶೇಖರ್ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ಯಾರನ್ನು ಜತೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೊತೆ ಇರುವವರ ವಿರುದ್ಧ ಎಂತಹ ಆರೋಪಗಳಿವೆ. ಮೊದಲು ಅವರ ತಟ್ಟೆ ಸ್ವಚ್ಛ ಮಾಡಿಕೊಳ್ಳಲಿ’ ಎಂದು ಖಾರವಾಗಿ ಉತ್ತರಿಸಿದರು.