ದೆಹಲಿ: ರಾಜ್ಯದ ಜನತೆ ನನ್ನನ್ನು ಒಬ್ಬ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಸ್ಮರಿಸಲು ಬಯಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತಂದವನು ಎಂದು ಜನ ಗುರುತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು. ರಾಜ್ಯದ ಜನ ಫಲಾನುಭವಿ ಗಳಿಗಿಂತ ಪಾಲುದಾರರಾಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ಟೈಮ್ಸ್ ನೌವ್ ಸಮಿಟ್ ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರ್ನಾಟಕವನ್ನು ಹೇಗೆ ಮುನ್ನಡೆಸಲು ಬಯಸುವಿರಿ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆ ಇದು.
ರಾಜ್ಯದಲ್ಲಿ ಅತ್ಯುತ್ತಮ ಹವಾಮಾನ, ಕೌಶಲ್ಯಯುಕ್ತ ಮಾನವ ಸಂಪನ್ಮೂಲವಿದೆ. ಆಧುನಿಕ ಕೃಷಿ ತಂತ್ರಜ್ಞಾನದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಕೃತಕ ಬುದ್ಧಿಮತ್ತೆಯವರೆಗೆ ರಾಜ್ಯ ಮುಂಚೂಣಿಯಲ್ಲಿದೆ. ಇವೆಲ್ಲಾ ನಮ್ಮ ಶಕ್ತಿಯಾಗಿದ್ದು, ಈ ಶಕ್ತಿಯ ಸದ್ಬಳಕೆ ಮಾಡುವುದು ನನ್ನ ಆಶಯ ಎಂದರು.
ನಿಮ್ಮ ತಂದೆಯ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಪರಂಪರೆಯನ್ನು ಮುಂದುವರೆಸುವ ಒತ್ತಡ ನಿಮ್ಮ ಮೇಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜಕೀಯವಾಗಿ ಹೌದು. ಆದರೆ ಈ ಹಿಂದೆ ಐದು ಮುಖ್ಯಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವ ಈಗ ಉಪಯೋಗಕ್ಕೆ ಬಂದಿರುವುದಾಗಿ ತಿಳಿಸಿದರು.
ರಾಜಕೀಯದ ಒತ್ತಡ ಹಾಗೂ ಮುಖ್ಯಮಂತ್ರಿಯಾಗಿ ಜನರ ಸಮಸ್ಯೆಗಳ ಒತ್ತಡಗಳನ್ನು ನಿವಾರಿಸಲು ಯಾವ ರೀತಿಯ ಸಂಗೀತ ಆಲಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು,
ಹಿಂದೂಸ್ತಾನಿ ಸಂಗೀತ ಅತ್ಯಂತ ಪ್ರಿಯ. ನನ್ನ ಶಾಲಾ ಕಾಲೇಜು ದಿನಗಳಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ನನ್ನ ಹೃದಯಕ್ಕೆ ಹತ್ತಿರ. ಉತ್ತಮ ಸಾಹಿತ್ಯವಿರುವ ಹಳೆಯ ಹಾಡುಗಳನ್ನು ಕೇಳುವ ಹವ್ಯಾಸವಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಮಗೆ ಇಷ್ಟದ ಚೌದವೀ ಕಾ ಚಾಂದ್ ಹೋ ಹಿಂದಿ ಚಿತ್ರದ ಗೀತೆ ಮೂಲಕ ಗಮನಸೆಳೆದರು.