ಬೆಂಗಳೂರು: ರಾಜ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿರುವ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜಾತ್ಯಾತೀತ ಜನತಾದಳ ಇದೀಗ ಪತ್ರಿಕೆ ಮೂಲಕ ಎದುರಾಳಿಗಳತ್ತ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ‘ಜನತಾ ಪತ್ರಿಕೆ’ ಹೆಸರಲ್ಲಿ ಮಾಸಿಕ ಹೊರಬರಲಿದೆ. ಈ ಪತ್ರಿಕೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರದ್ದೇ ಸಂಪಾದಕೀಯ ಸಾರಥ್ಯ.
ಈ ಪತ್ರಿಕೆ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಸೋಮವಾರದಂದು ಪಕ್ಷದ ವಿಚಾರಗಳನ್ನು ಜನತೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮಾಸಿಕ ‘ಜನತಾ ಪತ್ರಿಕೆ’ಯನ್ನು ಬಿಡುಗಡೆ ಮಾಡಲಾಗುವುದು. ನಾಡಿನ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರು ಪತ್ರಿಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ತನ್ನ ಸಂಪಾದಕೀಯ ನೇತೃತ್ವದಲ್ಲಿ ಈ ಪತ್ರಿಕೆ ಮೂಡಿ ಬರುತ್ತಿದ್ದು, ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಹಾಗೂ ಪಕ್ಷದ ದನಿಯನ್ನು ಜನರಿಗೆ ಮುಟ್ಟಿಸುವ ಗುರಿಯನ್ನು ಹೊಂದಿದೆ. ಕಾರ್ಯಕರ್ತರಿಗೆ ಪಕ್ಷದ ಬಗ್ಗೆ ದಿಕ್ಸೂಚಿಯಾಗಿ ಹಾಗೂ ಮಾರ್ಗದರ್ಶಿಯಾಗಿ ಮುನ್ನಡೆಸುತ್ತದೆ ಎಂದು ಅವರು ಜನತಾ ಪತ್ರಿಕೆ ಬಗ್ಗೆ ಮಾಹಿತಿ ನೀಡಿದರು. ನಾಡು, ನುಡಿ, ನೆಲ, ಜಲ, ಭಾಷೆ ಇತ್ಯಾದಿ ವಿಷಯಗಳನ್ನು ಒಳಗೊಳ್ಳುವ ಪತ್ರಿಕೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೆಲವರು ನಮ್ಮ ಮಿಷನ್ 123 ಬಗ್ಗೆ ಲಘುವಾಗಿ ಮಾತನ್ನಾಡುತ್ತಿದ್ದಾರೆ. ಹಾಗೆ ಮಾತನಾಡುವ ಅಗತ್ಯವಿಲ್ಲ. 2023ರ ನಮ್ಮ ಗುರಿ ಏನಿದೆ ಅದನ್ನು ಮುಟ್ಟುತ್ತೇವೆ. ನಮ್ಮ ದಾರಿ ಮತ್ತು ಗುರಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಯಾರೂ ಈ ಬಗ್ಗೆ ಉಪದೇಶ ಮಾಡುವ ಅಗತ್ಯ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.