ಬೆಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಸಚಿವರು ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ಪ್ರಕಟಿಸಿದ್ದಾರೆ.
ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಮುಜರಾಯಿ ಇಲಾಖೆಯಲ್ಲಿ ಜಾರಿಗೆ ತಂದ ಹೊಸ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೆ ತರಲು ತೀರ್ಮಾನಿಸಿದ್ದೇನೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದರು.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5ನೇವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಅರ್ಚಕರಿಗೆ 6ನೇವೇತನ ಆಯೋಗದ ವೇತನ ದೊರಕಿಸಿಕೊಡುವಂತೆ ಅರ್ಚಕರಿಂದ ಬಹಳ ದಿನಗಳಿಂದ ಬೇಡಿಕೆ ಇತ್ತು. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಜೊತೆ ಚರ್ಚಿಸಿ ತ್ವರಿತಗತಿಯಲ್ಲಿ ಅರ್ಚರಿಕರಿಗೆ 6ನೇ ವೇತನ ಆಯೋಗದ ವೇತನ ನೀಡಲು ತೀರ್ಮಾನಿಸಿದ್ದೇನೆ. ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ. 35%ರಷ್ಟು ಮೀರದಂತೆ ನೌಕರರನ್ನು 6ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಇದಕ್ಕೆ 20 ಕೋಟಿ ರೂ. ವೆಚ್ಚವಾಗಲಿದ್ದು, ಆಯಾ ದೇವಸ್ಥಾನಗಳ ನಿಧಿಯಿಂದ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ 6 ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ವೇತನ ನೀಡುಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿ ದರ್ಜೆಯ ಬಹುತೇಕ ದೇವಸ್ಥಾನಗಳಲ್ಲಿ ಕಾಯಂ ಅರ್ಚಕರು ಇರುವುದಿಲ್ಲ. ಈ ಬಗ್ಗೆ ಎಲ್ಲ ದೇವಸ್ಥಾಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಲ್ಲ ದೇವಸ್ಥಾನಗಳಿಗೆ ತಸ್ತಿಕ ಹಣ 19.ಕೋಟಿ ರೂ. ಬಾಕಿ ಇದ್ದು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಸ್ಥಾನಗಳ ಆಸ್ತಿ ಮಾರ್ಗನಕ್ಷೆ, ಅಲ್ಲಿನ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್ ಮೂಲಕ ತಿಳಿದುಕೊಳ್ಳುವಂತೆ ಐಟಿಎಂಎಸ್ (ಇಂಟಿಗ್ರೆಟೆಡ್ ಡೆವೆಲಪ್ ಮೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಜಾರಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದೊಂದು ವಿನೂತನ ಯೋಜನೆಯಾಗಿದ್ದು, ರಾಜ್ಯದಲ್ಲಿ ಇದನ್ನು ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಿಗೂ ಇದು ಪೂರಕವಾಗಲಿದೆ ಎಂದು ವಿವರಿಸಿದರು.
ವಿಜಯದಶಮಿ ದಿನ ರಾಜ್ಯದ ಎಲ್ಲ ಜನತೆಯ ಆರೋಗ್ಯಕ್ಕಾಗಿ ವಿಶೇಷ ಪೂಜೆ
ವಿಶ್ವದಲ್ಲಿ ಕೊರೊನಾ ಎರಡು ಅಲೆಗಳಿಂದ ಸಾಕಷ್ಟು ಜನರ ಜೀವ ಹಾನಿಯಾಗಿದೆ. ಈಗ ಮೂರನೆ ಅಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಾಯ ಪಟ್ಟಿದ್ದಾರೆ. ನಾವು ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವರ್ಗದ ದೇವಸ್ಥಾನಗಳಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 15 ರಂದು ಎಲ್ಲ ಜನರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲು ಎಲ್ಲ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಹಿಂದು ಧರ್ಮ ಶಾಸ್ತ್ರ ಪುರಾಣದಲ್ಲಿ ವಿಜಯದಶಮಿಯನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಇದು ದುಷ್ಟ ಶಕ್ತಿಯನ್ನು ಸಂಹರಿಸಿ ವಿಜಯವನ್ನು ಆಚರಿಸುವ ದಿನ. ಆದ್ದರಿಂದ ಈ ದಿನ ಶ್ರೀ ಭಗವತಿ ಮತ್ತು ಭಗವಂತನನ್ನು ವಿಶೇಷವಾಗಿ ಪ್ರಾರ್ಥಿಸಿ ಪೂಜಿಸಿದರೆ. ವಿಶೇಷ ಫಲ ಹೊಂದ ಬಹುದೆಂದು ಶಾಸ್ತ್ರ ವಿಧಿತವಾಗಿದೆ. ಅಲ್ಲದೇ ಭಕ್ತರ ನಂಬಿಕೆಯೂ ಆಗಿರುವುದರಿಂದ ಪ್ರಾಕೃತಿಕವಾಗಿ ಯಾರಿಗೂ ದಷ್ಪರಿಣಾಮ ಆಗದಂತೆ ವಿಜಯ ದಶಮಿಯ ದಿನ ಅಕ್ಟೋಬರ 15 ರಂದು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕೊರೊನಾ ಸಂಕಟ ದೂರ ಮಾಡಿ ಜನತೆಯ ಆರೋಗ್ಯ ಕಾಯುವಂತೆ ವಿಶೇಷ ಪೂಜೆ ನೆರವೇರಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಪ್ರವೇಶಕ್ಕೆ ಡ್ರೆಸ್ ಕೋಡ್ ಮಾಡುವ ಬಗ್ಗೆ ನನ್ನ ಮುಂದೆ ಯಾವುದೆ ಪ್ರಸ್ತಾಪ ಬಂದಿಲ್ಲ. ಧಾರ್ಮಿಕ ಪರಿಷತ್ ನಲ್ಲಿ ಚರ್ಚೆಯಾಗಿದ್ದರೆ ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುವುದು ಎಂದರು.
ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಮುಜಾವರ ಅವರನ್ನು ನೇಮಕ ಮಾಡಿದ್ದನ್ನು ರದ್ದು ಪಡಿಸಿರುವ ಹೈಕೋರ್ಟ್ ಆದೇಶದ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಚರ್ಚೆಯಾಗಿದೆ ಎಂದು ಸಚಿವರಿಗೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ, ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಈ ವೇಳೆ ಉಪಸ್ಥಿತರಿದ್ದರು.