ಬೆಂಗಳೂರು: ಉದ್ಯಾನ ನಗರಿಯ ದೇವರಚಿಕ್ಕನಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅನಾಹುತ ಇಬ್ಬರನ್ನು ಆಹುತಿ ತೆಗೆದುಕೊಂಡ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಯಾವುದೇ ಅಪಾರ್ಟ್‌ಮೆಂಟ್‌ನಲ್ಲಿ ಬಾಲ್ಕನಿ ಮುಚ್ಚಬಾರದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಿರುವ ಆದೇಶ ಗಮನಸೆಳೆದಿದೆ.
ಕಟ್ಟಡ ಉಪವಿಧಿ-2003, ಪರಿಷ್ಕೃತ ವಲಯ ನಿಯಮಾವಳಿಗಳು-2015 ಮತ್ತು ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯಾ-2016 ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚಲು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ನಿರ್ವಹಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂಬುದನ್ನು ಈ ಆದೇಶ ಸಂದರ್ಭದಲ್ಲಿ ಆಯುಕ್ತರು ಬೊಟ್ಟು ಮಾಡಿದ್ದಾರೆ.
ಇದೀಗ ವಸತಿ ಸಮುಚ್ಚಯಗಳಲ್ಲಿ ಅಥವಾ ಇತರೆ ಕಟ್ಟಡಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಸೂಚಿಸಿರುವ ಬಿಬಿಎಂಪಿ, ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ, ಇತರೆ ಕಟ್ಟಡಗಳಲ್ಲಿ ಮಾರ್ಪಾಡು ಅವಶ್ಯವಿದ್ದಲ್ಲಿ ಪಾಲಿಕೆಯ ಸಕ್ಷಮ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕಿದೆ.