ದೆಹಲಿ: ಕರ್ನಾಟಕದಲ್ಲಿ ದೇವಾಲಯಗಳ ಧ್ವಂಸ ನಡೆದಿರುವ ಘಟನೆ ಬಗ್ಗೆ ಸಾಧು ಸಂತರು ಆಕ್ರೋಶ ಹೊರ ಹಾಕಿದ್ದಾರೆ. ಅದರಲ್ಲೂ ಹಿಂದೂಗಳ ಶ್ರದ್ದಾ ಕೇಂದ್ರವನ್ನು ಕೋರ್ಟ್ ತೀರ್ಪಿನ ನೆಪದಲ್ಲಿ ನೆಲಸಮ ಮಾಡಿರುವ ಸರ್ಕಾರದ ವಿರುದ್ದ ನಾಗಸಾಧುಗಳು ಸಿಡಿದೆದ್ದಿದ್ದಾರೆ.
ಈ ಬೊಮ್ಮಾಯಿ ಸರ್ಕಾರದ ಆತುರದ ನಡೆ ಕುರಿತಂತೆ ಹಿಂದೂ ಜಾಗರಣ ವೇದಿಕೆ ಹೋರಾಟಕ್ಕೆ ಕರೆ ನೀಡಿರುವಂತೆಯೇ ಇನ್ನೊಂದೆಡೆ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿರುವ ತಪೋನಿಧಿ ಶ್ರೀ ಬಾಬಾ ವಿಠ್ಠಲ್ ಗಿರಿ ಜಿ ಮಹಾರಾಜ್, ಇಂತಹಾ ಘಟನೆಗಳು ನಾಡಿಗೆ ಒಳಿತಾಗುವಂಥದ್ದಲ್ಲ ಎಂದಿದ್ದಾರೆ.
ದೇವಾಲಯಗಳನ್ನು ಉಳಿಸುವ ಕೆಲಸಗಳಾಗಬೇಕೇ ಹೊರತು ಅವುಗಳನ್ನು ನಾಶಪಡಿಸುವುದು ಸರಿಯಲ್ಲ. ಹೀಗಿರುವಾಗ ಕರ್ನಾಟಕ ಸರ್ಕಾರ ಅಕ್ರಮಣಕಾರಿ ನಿಲುವು ತಾಳಿದೆ ಎಂದು ಸಿಟ್ಟು ಹೊರಹಾಕಿದ್ದಾರೆ.
ಉತ್ತರ ಭಾರತದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿ ತಪೋನಿರತ ಬಾಬಾ ವಿಠ್ಠಲ್ ಗಿರಿ ಜಿ ಮಹಾರಾಜ್ ಅವರು ಕರ್ನಾಟಕದಲ್ಲಿನ ಬೆಳವಣಿಗೆ ಬಗ್ಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗುತ್ತಿದ್ದಂತೆಯೇ ದೇವಸ್ಥಾನ ದ್ವಂಸದ ಕೆಲಸಕ್ಕೆ ಹೊಸ ಸರ್ಕಾರ ಕೈಹಾಕಿರುವುದು ಸರಿಯಲ್ಲ ಎಂದಿದ್ದಾರೆ.
ದೇವಾಲಯಗಳನ್ನು ಕಾನೂನುಬದ್ದ ಗೊಳಿಸಲು ಬಿಜೆಪಿ ಸರ್ಕಾರ ಆದ್ಯತೆ ನೀಡಬೇಕಿದೆ. ಜೊತೆಗೆ ನೆಲಸಮ ಮಾಡಿರುವ ದೇವಾಲಯಗಳನ್ನು ಪುನರ್‌ನಿರ್ಮಾಣ ಮಾಡಬೇಕು ಎಂದು ನಾಗಸಾಧು ತಪೋನಿಧಿ ಶ್ರೀ ಬಾಬಾ ವಿಠ್ಠಲ್ ಗಿರಿ ಜಿ ಮಹಾರಾಜ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಂದೇಶ ರವಾನಿಸಿ ಕಿವಿಮಾತು ಹೇಳಿದ್ದಾರೆ.
ಇವರ ಮೂಲ ಹೆಸರು ವಿಠಲ್. ದಕ್ಷಿಣ ಕನ್ನಡ ಮೂಲದ ಇವರು ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಹಿಂದೂ ಸಂಘಟನೆಗಳನ್ನು ಕಟ್ಟಿದವರು. ಸಂಘಟನೆಯ ಕೆಲಸಕ್ಕೆ ಮೀಸಲಿಟ್ಟ ಅವಧಿ ಕ್ರಮಿಸಿದ ನಂತರ, ಕೆಲವು ವರ್ಷಗಳ ಹಿಂದೆ ಹಿರಿಯ ಸಂತ, ಶ್ರೀ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಅವರ ಶಿಷ್ಯರಾಗಿ ದೀಕ್ಷೆ ಪಡೆದರು. ನಂತರ ವಿಠ್ಠಲ್‌ಗಿರಿ ಮಹಾರಾಜ್ ಅವರು ಉತ್ತರಖಂಡ್‌ನ ಪುಣ್ಯಕ್ಷೇತ್ರಗಳಾಶ್ರಮಗಳಲ್ಲಿ ತಪೋನಿರತರಾಗಿದ್ದಾರೆ. ಮೋದಿ, ಸುಷ್ಮಾ, ಜೇಟ್ಲಿ ಸಹಿತ ಹಿರಿಯ ನಾಯಕರ ಗುರು ಎಂದೇ ಗುರುತಿಸಿಕೊಂಡಿರುವ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಅವರ ಹರಿದ್ವಾರದ ಆಶ್ರಮಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರು ಕರ್ನಾಟಕದ ಬೆಳವಣಿಗೆ ಬಗ್ಗೆ ನಾಗಸಾಧು ವಿಠ್ಠಲ್‌ಗಿರಿ ಮಹಾರಾಜ್ ಅವರ ಗಮನಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಕನ್ಬಡದಲ್ಲೇ ಪ್ರತಿಕ್ರಿಯೆ ನೀಡಿದ ವಿಠ್ಠಲ್‌ಗಿರಿ ಮಹಾರಾಜ್ ಅವರು ರಾಜ್ಯ ಸರ್ಕಾರದ ನಡೆ ಬಗ್ಗೆ ಸಿಟ್ಟು ವ್ಯಕ್ತಪಡಿಸಿದರಲ್ಲದೆ, ತಪ್ಪನ್ನು ಸರಿಪಡಿಸುವಂತೆಯೂ ಸಲಹೆ ಮಾಡಿದ್ದಾರೆ.