ಮಂಗಳೂರು: ಚಾತುರ್ಮಾಸ್ಯ ವೃತವು ಪವಿತ್ರ ವೃತಗಳಲ್ಲಿ ಒಂದಾಗಿದ್ದು, ಬಿಲ್ಲವ ಸಮಾಜದವರಾದ ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಈ ಕೈಂಕರ್ಯ ಮಾಡಲಿದ್ದಾರೆ. ಇದು ನಮ್ಮ ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಬಿಲ್ಲವ ಸಮಾಜದ ಮುಖಂಡರು ಹೇಳಿದ್ದಾರೆ.
ಈ ವೃತ ಕಠಿಣ ಮಾತ್ರವಲ್ಲದೆ ಅಷ್ಟೇ ಖರ್ಚುದಾಯಕವೂ ಆಗಿದೆ. ಹಾಗಾಗಿ ಕನ್ಯಾಡಿ ಶ್ರೀಗಳ ಈ ಕೈಂಕರ್ಯಕ್ಕಾಗಿ ಸಮಾಜ ಬಾಂಧವರು ತನು ಮನ ಧನಗಳಿಂದ ಸಹಕರಿಸಲಿದೆ ಎಂದವರು ಹೇಳಿದ್ದಾರೆ.
ಈ ಚಾತುರ್ಮಾಸ್ಯ ಸಂಬಂಧದ ತಯಾರಿ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ವಿವಿಧ ಬಿಲ್ಲವ ಸಂಘ ಸಂಸ್ಥೆಗಳ ಮುಖಂಡರ ಉಪಸ್ಥಿತಿಯಲ್ಲಿ ಕಾರ್ಕಳ ಶ್ರೀ ಕೃಷ್ಣ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯ ನಿರ್ಣಯದಂತೆ ಈ ತಿಂಗಳ 22ರಂದು ಕಾರ್ಕಳ ತಾಲೂಕಿನ ಬಿಲ್ಲವ ಮುಖಂಡರು, ನಮ್ಮ ನೂತನ ಇಂಧನ ಹಾಗು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀಯುತ ಸುನೀಲ್ ಕುಮಾರ್ ರವರು ಹಾಗೂ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮುಖ್ತೇಸರರು, ಯೂತ್ ಬಿಲ್ಲವ ಸಂಘಟನೆಯ ಗೌರವ ಅಧ್ಯಕ್ಷರಾದ ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕನ್ಯಾಡಿಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ರೀತಿಯ ರಾಜಕೀಯ ಕಾರ್ಯಚಟುವಟಿಕೆಗಳು ಅಥವ ರಾಜಕೀಯ ಪಕ್ಷಕ್ಕೆ ಸಂಬಂಧಿಸಿರದೆ ನಮ್ಮ ಬಿಲ್ಲವ ಸಮಾಜದ ಬಾಂಧವರು ಜೊತೆಗೂಡಿ ಮಾಡುವ ಒಂದು ಕಾರ್ಯಕ್ರಮವಾಗಿದೆ ಎಂದು ಮುಖಂಡರು ಘೋಷಿಸಿದರು.
ಅಂದು ಬರುವವರಿಗೆ ಕಾರ್ಕಳದ ಪ್ರತಿ ಗ್ರಾಮದಿಂದ ವಾಹನದ ವ್ಯವಸ್ಥೆಯಿದ್ದು ಬೆಳಿಗ್ಗೆ 08-00 ಗಂಟೆಗೆ ಶ್ರೀ ಕೃಷ್ಣ ಕ್ಷೇತ್ರದಲ್ಲಿ ಉಪಹಾರವನ್ನು ಸೇವಿಸಿ ಮೆರವಣಿಗೆಯ ಮುಖಾಂತರ ಶ್ರೀ ಕ್ಷೇತ್ರ ಕನ್ಯಾಡಿಗೆ ಹೊರಡಲಾಗುವುದು ಎಂದು ಯೂತ್ ಬಿಲ್ಲವ ಕಾರ್ಕಳ ಇದರ ಪ್ರಮುಖರು ಮಾಹಿತಿ ನೀಡಿದ್ದಾರೆ.