ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಸಂಬಂಧ ಕಸರತ್ತು ನಡೆಸುತ್ತಿದ್ದು ನಾಳೆ ದೆಹಲಿಯಲಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ.
ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಮಾಹಿತಿ ಹಂಚಿಕೊಂಡರು.
ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರುವ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಅದಾಗ್ಯೂ ಸಹ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ ಎಂದರು.
ರಾಜಕೀಯಕ್ಕೆ ಬರುವ ಮೊದಲಿನಿಂದಲೇ ನಾವಿಬ್ಬರೂ ಸ್ನೇಹಿತರು. ಅವರ ಬಗ್ಗೆ ಅಪಾರವಾದ ಅಭಿಮಾನ, ಪ್ರೀತಿ – ವಿಶ್ವಾಸ ಇದೆ. ಅವರೊಂದಿಗೆ ಮಾತನಾಡಿ ಅವರ ಬಯಕೆಯನ್ನು ತಿಳಿದುಕೊಂಡು ಪಕ್ಷದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.