ಬೆಂಗಳೂರು: ರಾಜ್ಯ ಬಿಜೆಪಿಯ ಬೆಳವಣಿಗೆಗಳು ಇದೀಗ ರೋಚಕ ಘಟ್ಟ ತಲುಪಿದೆ. ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಲುಕಿರುವ ಸಿಎಂ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದು ಬೋರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ ಎಂಬ ಮಾಹಿತಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ಜುಲೈ 25ರಂದು ಹೈಕಮಾಂಡ್ ಸಂದೇಶ ಆದರಿಸಿ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿರುವ ಯಡಿಯೂರಪ್ಪ ಅವರ ನಾಳಿನ ಕಾರ್ಯಕ್ರಮಗಳ ಪಟ್ಟಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವರೇ ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ. ಯಡಿಯೂರಪ್ಪ ಅವರ ನಾಳಿನ ದಿನಚರಿ ಕುರಿತ ಮಾಹಿತಿಗಳು ಕೂಡಾ ಇಂತಹಾ ಅನುಮಾನಗಳನ್ನು ಹೆಚ್ಚಿಸಿದೆ.

ನಾಳೆ ಮಧ್ಯಾಹ್ನ ನಂತರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸರ್ಕಾರದ ಎರಡು ವರ್ಷಗಳ ಸಾಧಾನಾ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆವರೆಗೂ ನಡೆಯವ ಸಾಧ್ಯತೆಗಳಿವೆ. ಅನಂತರದ ಸಮಯವನ್ನು ಅವರು ರಹಸ್ಯವಾಗಿ ಕಾಯ್ದಿರಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಜೋಷಿ ನಡೆಯೂ ನಿಗೂಢ..
ಇನ್ನೊಂದೆಡೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿವೆ. ಈ ನಡುವೆಯೇ ನಾಳೆ ದೆಹಲಿಯಲ್ಲಿರಬೇಕಿದ್ದ ಜೋಷಿ, ಇಂದು ಮಧ್ಯಾಹ್ನ ಹುಬ್ಬಳ್ಳಿಯಿಂದ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಬಳಿಕ ದಿಢೀರನೆ ದೆಹಲಿ ಪ್ರವಾಸವನ್ನು ರದ್ದುಪಡಿಸಿ, ನಾಳೆ ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನ ಹತ್ತಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಮ್ಮೆ ಟಿಪಿ ಬದಲಿಸಿರುವ ಜೋಷಿ ಇಂದು ಸಂಜೆ ದೆಹಲಿಗೆ ತರಳಲು ನಿರ್ಧರಿಸಿದರು. ಇಂದು ಸಂಜೆಯೇ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ದೆಹಲಿಗೆ ಹಾರಿದ ನಿರಾಣಿ..
ಮತ್ತೊಂದೆಡೆ ಸಿಎಂ ಪಟ್ಟಕ್ಕಾಗಿ ಭಾರೀ ಲಾಬಿ ನಡೆಸುತ್ತಿರುವ ಗಣಿ ಸಚಿವ ಮುರುಗೇಶ್ ನಿರಾಣಿ ಮತ್ತೊಮ್ಮೆ ದೆಹಲಿಗೆ ತೆರಳಿ ಬಿಜೆಪಿಯ ವಿದ್ಯಮಾನಗಳಿಗೆ ರೋಚಕತೆ ತುಂಬಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಪ್ರಯತ್ನ ಅವರದ್ದು ಎನ್ನಲಾಗುತ್ತಿದೆ.
























































