ಬೆಂಗಳೂರು: ರಾಜ್ಯ ನಾಯಕತ್ವ ಬದಲಾವಣೆ ಸಾಧ್ಯತೆಗಳ ಕುರಿತ ವಿದ್ಯಮಾನ ಇದೀಗ ಬಿಜೆಪಿ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ ಎಂಬಂತಾಗಿದೆ. ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಲುಕಿರುವ ಬಿ.ಎಸ್.ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯುವುದು ಅನಿವಾರ್ಯವೆನಿಸಿದರೂ ಪರ್ಯಾಯ ನಾಯಕನ ಆಯ್ಕೆ ವಿಚಾರ ಬಿಜೆಪಿ ವರಿಷ್ಠರ ಪಾಲಿಗೆ ಕಬ್ಬಿಣದ ಕಡಲೆ ಎಂಬಂತಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಪಟ್ಟದಿಂದ ಕೆಳಗಿಳಿಸುವ ಪ್ರಯತ್ನದ ವಿರುದ್ದ ಸಿಡಿದೆದ್ದಿರುವ, ಲಿಂಗಾಯತ ಸಮುದಾಯ ಇದೀಗ ಬಿಜೆಪಿ ಹೈಕಮಾಂಡ್‌ಗೆ ಮತ್ತೊಮ್ಮೆ ಪ್ರತ್ಯೇಕತೆಯ ಕೂಗಿನ ಅನಿವಾರ್ಯತೆಯ ಎಚ್ಚರಿಕೆಯ ಸಂದೇಶವನ್ನೇ ರವಾನಿಸಿದೆ.. ಈ ಮೂಲಕ ಪರ್ಯಾಯ ನಾಯಕನ ಆಯ್ಕೆ ಪ್ರಕ್ರಿಯೆಗೆ ಈ ಮಠಾಧಿಪತಿಗಳು ರೋಚಕತೆಯ ಟ್ವಿಸ್ಟ್ ಕೊಟ್ಟಿದ್ದಾರೆ.
ಕಾವಿಧಾರಿಗಳ ಶಕ್ತಿ ಪ್ರದರ್ಶನ:
ಯಡಿಯೂರಪ್ಪ ಪರ ಬೀದಿಗಿಳಿದಿರುವ ಲಿಂಗಾಯತ ಮಠಾಧಿಪತಿಗಳು ಬೆಂಗಳೂರಿನಲ್ಲಿಂದು ಶಕ್ತಿ ಪ್ರದರ್ಶನ ನಡೆಸಿದರು. ಮಠಾಧಿಪತಿಗಳೇ ಸಮಾಗಮನವಾದ ಈ ಸಮಾವೇಶದಲ್ಲಿ ಲಿಂಗಾಯತ ಸಮುದಾಯದ ರಾಜಕೀಯ ಕೃಪೆ ಮುಂದೆ ಹೇಗಿರಬಹುದು ಎಂಬ ಬಗ್ಗೆ ಚಿಂಥನ-ಮಂಥನ ನಡೆಯಿತು. ಒಂದು ವೇಳೆ ಲಿಂಗಾಯತ ಸಮುದಾಯದ ಮುಖಂಡರ ಕೈಯಿಂದ ಅಧಿಕಾರವನ್ನು ಕಸಿದುಕೊಂಡರೆ ಆರೆಸ್ಸೆಸ್ ಬಿಜೆಪಿಯಿಂದ ನಮ್ಮ ಸಮುದಾಯ ದೂರ ಸರಿಯಲಿದೆ ಎಂಬ ಸಂದೇಶವನ್ನು ಈ ಮಠಾಧೀಶರು ಸಾರಿದ್ದಾರೆ.
ಏನಿದು ದಿಢೀರ್ ಟ್ವಿಸ್ಟ್..?
ಈ ವರೆಗೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದ ಲಿಂಗಾಯತ ಮಠಾಧಿಪತಿಗಳಿಗೆ ತಾವು ಏನೇ ಹೋರಾಟ ಮಾಡಿದರೂ ಬಿಎಸ್‌ವೈ ಅವರ ಪದತ್ಯಾಗವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಆದರೂ ತಮ್ಮ ಸಮುದಾಯದ ಶಕ್ತಿ ಪ್ರದರ್ಶನ ಮಾಡುವ ಉದ್ದೇಶವಿತ್ತು. ಅದೇ ಹೊತ್ತಿಗೆ ಪ್ರಲ್ಹಾದ್ ಜೋಷಿ ಅವರಿಗೆ ಪಟ್ಟ ಕಟ್ಟಲು ಬಿಜೆಪಿ ಮುಂದಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಲಿಂಗಾಯತ ಸ್ವಾಮೀಜಿಗಳ ಸಮೂಹ ಸಿಡಿದೆದ್ದಿದೆ. ಯಾವುದೇ ಕಾರಣಕ್ಕೂ ಲಿಂಗಾಯತ ಮುಖಂಡನನ್ನು ಅಧಿಕಾರದಿಂದ ಕೆಳಗಿಳಿಸಿ ಪ್ರಲ್ಹಾದ್ ಜೋಷಿ ಅಥವಾ ಲಿಂಗಾಯತರಲ್ಲದ ಇನ್ಯಾರನ್ನೋ ಮುಖ್ಯಮಂತ್ರಿ ಮಾಡಬಾರದು. ಹಾಗೇನಾದರೂ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದಿಂದ ಲಿಂಗಾಯತ ಸಮಾಜ ದೂರವಾಗಲಿದೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಈ ಮೂಲಕ ಪ್ರಲ್ಹಾದ್ ಜೋಷಿ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಈ ಯತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಯಾರು ಹಿತವರು…?
ಸದ್ಯ ಲಿಂಗಾಯತ ಮುಖಂಡ ಯಡಿಯೂರಪ್ಪ ಅವರಿಗೆ ಬಿಜೆಪಿ ಅವಮಾನ ಮಾಡುತ್ತಿದೆ. ಈ ಅವಮಾನವನ್ನು ಸರಿಪಡಿಸಬೇಕಾದರೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಯಾಗಬೇಕು ಎಂದು ಕೊಳದ ಮಠದ ಶಾಂತವೀರ ಸ್ವಾಮಿಗಳು ಹೇಳುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯುವುದೇ ಆದಲ್ಲಿ ಅರವಿಂದ ಬೆಲ್ಲದ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಶಾಂತವೀರ ಮಹಾಸ್ವಾಮಿ ಪ್ರತಿಪಾದಿಸಿದ್ದಾರೆ.
ಧಾರವಾಡ ಸಹಿತ ಉತ್ತರ ಕರ್ನಾಟಕದ ಬಹುತೇಕ ಸ್ವಾಮೀಜಿಗಳು ಬಿಎಸ್‌ವೈ ಅವರು ರಾಜೀನಾಮೆ ನೀಡಿದಲ್ಲಿ ಅರವಿಂದ ಬೆಲ್ಲದ್ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಸಂದಿಗ್ಧ ಸುಳಿಯಲ್ಲಿ ಬಿಜೆಪಿ:
ಮೂರು ವರ್ಷಗಳ ಹಿಂದೆ ಎದುರಾಗಿರುವ ಸವಾಲು ಬಿಜೆಪಿಗೆ ಮತ್ತೊಮ್ಮೆ ಎದುರಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಆರೆಸ್ಸೆಸ್‌ಗೂ ಸವಾಲಾಗಿತ್ತು. ಇದೀಗ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಿ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದರೆ ಆ ಸಮುದಾಯ ತಟಸ್ಥ ನಿಲುವಿನಿಂದ ಮತ್ತೆ ಪ್ರತ್ಯೇಕ ಧರ್ಮದತ್ತ ಮುಖ ಮಾಡುವ ಆತಂಕ ಆರೆಸ್ಸೆಸ್‌ಗೂ ಎದುರಾಗಿದೆ. ಹಾಗೊಂದು ವೇಳೆ ಪರಿಸ್ಥಿತಿ ತಿರುವು ಪಡೆದರೆ ಕಾಂಗ್ರೆಸ್‌ಗೆ ವರದಾನವಾಗಬಹುದು.
ಅರವಿಂದ ಬೆಲ್ಲದ್ ಅವರೇ ಏಕೆ..?
ಲಿಂಗಾಯತ ಮುಖಂಡರ ಪೈಕಿ ಮರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ್ ಬೊಮ್ಮಾಯಿ ಸಹಿತ ಹಲವು ನಾಯಕರಿದ್ದಾರೆ. ಆದರೆ ಆರೋಪಗಳ ಸುಳಿಯಲ್ಲಿ ಸಿಲುಕಿದವರು ಮತ್ತೆ ಮತ್ತೆ ಪದತ್ಯಾಗ ಮಾಡುವಂತಾಗಬಾರದು. ಹಾಗಾಗಿ ನಿಷ್ಕಳಂಕ, ದಿಟ್ಟ ನಾಯಕ ಅರವಿಂದ್ ಬೆಲ್ಲದ್ ಅವರನ್ನೇ ಸಿಎಂ ಮಾಡಬೇಕು ಎಂಬುದು ಮಠಾಧೀಶರ ಸಹಿತ ಲಿಂಗಾಯತ ಮುಖಂಡರು ಆಗ್ರಹ ಮುಂದಿಟ್ಟಿದ್ದಾರೆ.
ಜಯಮೃತ್ಯುಂಜಯ ಸ್ವಾಮಿಗೆ ಪರಮಾಧಿಕಾರ..
ಲಿಂಗಾಯತ ನಾಯಕನ ಆಯ್ಕೆ ಕುರಿತಂತೆ ಸಮಸ್ತ ಸಮುದಾಯದ ಪರವಾಗಿ ಬಿಜೆಪಿ ಜೊತೆ ಮತುಕತೆ ನಡೆಸಲು ಲಿಂಗಾಯತ ಮಠಾಧೀಶರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗೆ ಪರಮಾಧಿಕಾರ ನೀಡಿದೆ.
ಈ ಕುರಿತಂತೆ ಉದಯ ನ್ಯೂಸ್ ಜೊತೆ ಮತನಾಡಿದ ಜಯಮೃತ್ಯುಂಜಯ ಶ್ರೀಗಳು, ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯದ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಹೆಸರನ್ನು ಹಾಗೂ ಮುರುಗೇಶ್ ನಿರಣಿ ಅವರನ್ನು ಸಿಎಂ ಸ್ಥಾನಕ್ಕಾಗಿ ಮುಂದಿಡಲಾಗಿತ್ತು. ಈ ಪೈಕಿ ಧ್ವನಿಯಾಗಬಲ್ಲವರನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಲಿ ಎಂದು ಹೇಳಿದ್ದಾರೆ. ಅವಕಾಶ ಸಿಕ್ಕಿದರೆ ಈ ಕುರಿತಂತೆ ಪ್ರಧಾನಿ ಮೋದಿ ಜೊತೆ ಮಾತನಾಡಲು ಸಮಸ್ತ ಮಠಾಧೀಶರು ತಮಗೆ ಹೊಣೆ ವಹಿಸಿದ್ದಾರೆ. ಅವಕಾಶ ಸಿಕ್ಕಿದರೆ ಮೋದಿ ಜೊತೆ ಮಾತನಾಡಲು ತಾವು ಸಿದ್ದ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.