ಬೆಳಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಭಂದಿಸಿದಂತೆ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ .ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಈ ನಿಟ್ಟಿನಲ್ಲಿ ಅವರೇ ಹೇಳಿಕೆ ನೀಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ನಂದಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿಗಳೇ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟಪಡಿಸುತ್ತಿದ್ದಾರೆ. ನಾನು ಗಮನಿಸುತ್ತೇದ್ದೇನೆ ಎಂದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ಆದ ಮೇಲೆ ಕಾಂಗ್ರೆಸ್ ನಿಂದ ಬಂದಿರುವ ಹತ್ತಕ್ಕೂ ಹೆಚ್ಚು ಶಾಸಕರಿಗೆ ಹೊಸ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನ ಕೊಡುವುದಿಲ್ಲ ಎಂಬ ಮಾಹಿತಿಯಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ ಎಂದರು.
ಯಾರಿಗೂ ಮಂತ್ರಿ ಸ್ಥಾನ ಶಾಶ್ವತವಲ್ಲ ಎಂದು ಸಚಿವ ಯೋಗೇಶ್ವರ್ ಇದೇ ವೇಳೆ ಮಾರ್ಮಿಕವಾಗಿ ನುಡಿದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನನ್ನ ರಾಜಕೀಯ ವಿರೋಧಿ ಅವರ ನಿಲುವಿನಲ್ಲಿ ಸದಾ ದ್ವಂದ್ವ ಇರುತ್ತದೆ. ಬೆಳಿಗ್ಗೆ ಮುಖ್ಯಮಂತ್ರಿಗಳ ಮನೆಗೆ ಹೋಗಿ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ನಂತರ ಮುಖ್ಯಮಂತ್ರಿಗಳನ್ನೇ ದೂರುತ್ತಾರೆ ಹೀಗಾಗಿ ಕುಮಾರಸ್ವಾಮಿಯವರನ್ನು ದೂರ ಇಡಿ ಅವರನ್ನು ನಂಬಬೇಡಿ ಅವರನ್ನು ಹತ್ತಿರ ಇಟ್ಟುಕೊಳ್ಳಬೇಡಿ ಎಂದು ನಾನು ಹೇಳಿದ್ದೇನೆ ಹಾಗೂ ಪಕ್ಷವೂ ಹೇಳಿದೆ ಎಂದವರು ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲ ಕೆಲಸ ಮಾಡಿಸಿಕೊಂಡು ಮತ್ತೆ ಅವರನ್ನೇ ಟೀಕಿಸುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಲೋಕಸಭಾ ಸದಸ್ಯ ಡಿಕೆ ಸುರೇಶ್ ನಿಮ್ಮನ್ನು
ಸಿಡಿ ಯೋಗೇಶ್ವರ ಎಂದು ಕರೆದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ ಅವರು ಸುರೇಶ್ ಅವರಿಗೆ ನಾನು ಸಹ ಕೆಡಿ ಸುರೇಶ್ ಎಂದು ಕರೆಯಬಹುದು ಎಂದರು. ಈ ತರಹದ ವಿರೋಧ ನಾನು ಎದುರಿಸುತ್ತೇನೆ . ನನಗೆ ಕಪ್ಪುಚುಕ್ಕೆ ತರಲು ಸುರೇಶ್ ಅವರು ಬಯಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಅಧಿಕಾರವನ್ನು ಹಿಡಿಯಲು ಹೊಸ ಬಟ್ಟೆಗಳನ್ನು ಒಲಿಸಿಕೊಂಡಿದ್ದರು ಇದೀಗ ರಾಜ್ಯದಲ್ಲಿ ರಾಜಕೀಯ Reallinment ಆಗುತ್ತಿದೆ. ಹಾಗಾಗಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ಹೇಳಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು.


























































