(ಚಿತ್ರಗಳು: ಮಂಜು ನೀರೇಶ್ವಾಲ್ಯ)
ಮಂಗಳೂರು : ರಾಜ್ಯದಲ್ಲಿ ಕೊರೋನಾ ಅನ್‌ಲಾಕ್ ಪ್ರಕ್ರಿಯೆ ಮುಂದುವರಿದಿದ್ದು, ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅವಕಾಶ ಸಿಕ್ಕಿದೆ. ಆಸ್ತಿಕ ಸಮುದಾಯದಲ್ಲಿ ಮಂದಹಾಸ ಮೂಡಿದೆ. ಇದೇ ಸಂದರ್ಭದಲ್ಲಿ ಮಂಗಳೂರಿನ ರಥಬೀದಿಯ ಪುಣ್ಯಕ್ಷೇತ್ರವು ಮಹಾಕೈಂಕರ್ಯ ಮೂಲಕ ಆಸ್ತಿಕ ಸಮುದಾಯದ ಚಿತ್ತ ಸೆಳೆದಿದೆ.
ಮಂಗಳೂರಿನ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ಹಾಗೂ ಪರಿವಾರ ದೇವರುಗಳ ಪ್ಲವ ನಾಮ ಸಂವತ್ಸರದ ಚಾತುರ್ಮಾಸ ವ್ರತ ಆಚರಣೆ ಸಂದರ್ಭದ ಪೂಜಾ ಸಡಗರವು ಭಕ್ತರ ಪಾಲಿಗೆ ಅವಿಸ್ಮರಣೀಯ ಕೈಂಕರ್ಯ.
ಇಂದು ಮುಂಜಾನೆ ಶ್ರೀದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ನೆರವರಿತು. ಪುಳಕಾಭಿಷೇಕ , ಪವಮಾನಾಭಿಷೇಕ , ಬಳಿಕ ವೈದಿಕರಿಂದ ಶತ ಕಲಶಾಭಿಷೇಕ ನೆರವೇರಿತು .
ಮಧ್ಯಾಹ್ನ ಮಹಾ ಪೂಜೆಯ ವೈಭವವೂ ಅನನ್ಯ ಕೈಂಕರ್ಯಕ್ಕೆ ಸಾಕ್ಷಿಯಾಯಿತು. ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಸಹಿತ ಧಾರ್ಮಿಕ ಪ್ರಮುಖರು, ಗಣ್ಯರರು ಈ ಸಂಪ್ರದಾಯವನ್ನು ಸಾಕ್ಷೀಕರಿಸಿದರು.