ಮಂಗಳೂರು: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 5 ವರ್ಷ 2 ತಿಂಗಳುಗಳಲ್ಲಿ 134 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ ನಾಡಿನ ಗಮನಸೆಳೆದಿದೆ
ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 6ನೇ ವರ್ಷದ ಪಯಣದಲ್ಲಿ 4 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗ ಮಾತ್ರ ಗೊಂದಲ, ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾಧ್ಯ ಎಂದು ಈ ಸಂಘಟನೆಯ ಕಾರ್ಯಕರ್ತರು ಹೇಳಿದ್ದಾರೆ.
ಅಂದು ಅಡಿಗರು ಆಡಿದ ಮಾತು ‘ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು’ ಎಂಬ ಮಾತಿನಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದಂತ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಸಙಘಟನೆಯ ಪ್ರಮುಖರು ಕೃತಜ್ಞತೆ ಸಲ್ಲಿಸಿದ್ದಾರೆ.
131ನೇ ಸೇವಾಯೋಜನೆಯಾಗಿ ಬ್ರಹ್ಮಾವರ ತಾಲೂಕಿನ ಕಜೆಮಂಗ್ಳೂರು ಗ್ರಾಮದ ಸೂರಳ ನಿವಾಸಿ ಗೀತಾ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ನಿಯಮಿತವಾಗಿ ಇವರಿಗೆ ಚಿಕಿತ್ಸೆಯ ಅಗತ್ಯವುದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಗಳ ಚೆಕ್ ಅನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
132ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಸುರೇಶ್ ಪೂಜಾರಿ ಇವರ ಮಗ, ಎರಡೂ ಕಣ್ಣುಗಳನ್ನು ಕಳೆದುಕೊಂಡಿರುವ ಹೇಂಮತ್ ಅವರ ಚಿಕತ್ಸೆಗಾಗಿ 15,000 ರೂಗಳ ಚೆಕ್ ಹಸ್ತಾಂತರಿಸಲಾಯಿತು.
133ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಕರೋಪಾಡಿ ಕಾಯಿಮಾರ್ ನಿವಾಸಿ ಬಾಲಕೃಷ್ಣ ಇವರು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 15,000 ರೂಗಳ ಚೆಕ್ ಹಸ್ತಾಂತರಿಸಲಾಯಿತು.
134ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಮೀನಾಕ್ಷಿ ಇವರು ಪತಿ ಹಲವು ವರ್ಷಗಳ ಹಿಂದೆ ದೈವಾಧೀನರಾಗಿದ್ದು ಇವರು ಪೋಲಿಯೋ ಪೀಡಿತರಾಗಿದ್ದಾರೆ ಹಾಗೂ ಇವರ ಕುಟುಂಬದ ಜವಾಬ್ದಾರಿ ಇವರ ಮೇಲೆ ಇದ್ದು ಇವರ ಆರ್ಥಿಕ ಸಂಕಷ್ಟವನ್ನು ಕಂಡು ಇವರಿಗೆ 15,000 ರೂಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು ಎಂದು ಸಂಘಟನೆಯ ಪ್ರಮುಖರು ಮಾಹಿತಿ ಹಂಚಿಕೊಂಡಿದ್ದಾರೆ.
ಈ 4 ಸೇವಾಯೋಜನೆಗಳಿಗೆ ಒಟ್ಟು 60,000 ರೂ.ಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ ಸಂಘಟನೆಯು 134ನೇ ಸೇವಾಯೋಜನೆಗಳನ್ನು ತಲುಪಿದ್ದು ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಲಾಯಿತು ಎಂದು ಬೆಳ್ತಂಗಡಿಯ ವೀರಕೇಸರಿ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.