ಉಡುಪಿ: ಕರಾವಳಿಯ ಜೀವನಾಡಿಯಾದ ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ “ಪಂಚಗಂಗಾ ಎಕ್ಸ್‌ಪ್ರೆಸ್” ಎಂದು ನಾಮಕರಣ ಮಾಡಲಾಗಿದೆ.
ಕರಾವಳಿ ಜಿಲ್ಲೆಗಳ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿಯ ಹೆಸರಿನಿಂದ ಆಯ್ದ “ಪಂಚಗಂಗಾ ಎಕ್ಸ್‌ಪ್ರೆಸ್” ಎಂಬ ಹೆಸರನ್ನು ಕೆಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿ ಆದೇಶಿಸಿದೆ.
ಕ್ಷೇತ್ರದ ಜನರ ಅಪೇಕ್ಷೆಯಂತೆ ಹಿಂದಿನ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗು ಜನಜೀವನಕ್ಕೆ ಅದಾರವಾಗಿದ್ದು, ಈ ಕಾರಣದಿಂದ ನೂತನ ಬೆಂಗಳೂರು-ಕಾರವಾರ ರೈಲಿಗೆ “ಪಂಚಗಂಗಾ” ಎನ್ನುವ ಹೆಸರಿಡಬೇಕು ಎಂದು ಕೇಳಿಕೊಳ್ಳಲಾಗಿತ್ತು. ಈ ಹೆಸರನ್ನು ಇಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಪಟ್ಟು ಹಿಡಿದಿದ್ದರು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ “ಪಂಚ ಗಂಗಾ ಎಕ್ಸ್‌ಪ್ರೆಸ್” ಎಂಬ ಹೆಸರನ್ನು ಕರಾವಳಿಯ ಜೀವನಾಡಿಯದ ಬೆಂಗಳೂರು-ಕಾರವಾರ ರೈಲಿಗೆ ನಾಮಕರಣ ಮಾಡಿದ ಕೇಂದ್ರ ಸರಕಾರಕ್ಕೆ ಹಾಗು ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.