ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತಂತೆ ಸ್ಮಾರ್ಟ್ ಸಿಟಿ ನಿಗಮದ ಮುಖ್ಯಸ್ಥ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ 27 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ರಾಕೇಶ್ ಸಿಂಗ್ ಸೂಚಿಸಿದರು.
ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಚಲನೆಗೆ ಯಾವುದೇ ಅಡೆತಡೆ ಉಂಟಾಗದಂತೆ ರಸ್ತೆಗಳ ಮೇಲೆ ಬಿದ್ದಿರುವ ಮಣ್ಣನ್ನು ತೆಗೆದು ಸ್ವಚ್ಚಗೊಳಿಸಬೇಕು. ರಸ್ತೆ ಅಗೆದಿರುವ ಭಾಗಗಳಲ್ಲಿ ಸರಿಯಾಗಿ ಬ್ಯಾರಿಕೇಡ್ ಹಾಕಬೇಕು. ತೆರೆದಿರುವ ಮ್ಯಾನ್ ಹೋಲ್ ಗಳನ್ನು ಮುಚ್ಚಬೇಕು ಎಂದು ರಾಕೇಶ್ ಸಿಂಗ್, ಗುತ್ತಿಗೆದಾರರಿಗೆ ಸೂಚಿಸಿದರು.
ಪರಿಶೀಲನೆಗೂ ಮುನ್ನ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತೆ ಶ್ರೀಮತಿ ವಂದಿತಾ ಶರ್ಮ ಅವರು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ರಂಗನಾಥ ನಾಯ್ಕ ಅವರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಸೂಚಿಸಿದರು.