ಮಂಗಳೂರು: ರಾಜ್ಯದಲ್ಲಿ ಚರಿತ್ರೆ ಬರೆದ ಪೊಲೀಸ್ ಅಧಿಕಾರಿಗಳು ಅನೇಕರು. ಚರಿತ್ರೆಯಾದವರೂ ಹಲವರು. ಈ ಎರಡೂ ಹೆಗ್ಗುರುತಾಗಿ, ಹಲವಾರು ಚಾರಿತ್ರಿಕ ಸನ್ನಿವೇಶಗಳಲ್ಲಿ ರೋಚಕ ಕಥೆಯಾದವರು ಈ ವಿನಯ್ ಗಾಂವಕರ್.
ಹಲವಾರು ಘಟನೆಗಳಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳ ನಡುವೆ ಕರ್ನಾಟಕ ಪೊಲೀಸರ ವರ್ಚಸ್ಸು ಏನು ಎಂಬುದನ್ನು ಅನಾವರಣ ಮಾಡಿದ್ದ ಖಾಕಿ ಬ್ರೈನ್ ವಿನಯ್ ಗಾವಂಕರ್ ಇದೀಗ ಪೊಲೀಸ್ ಸೇವೆಗೆ ವಿದಾಯ ಹೇಳಿದ್ದಾರೆ.
ಬಂದರು ನಗರಿ ಮಂಗಳೂರು ಕಮಿಷನರೇಟ್‌ನ ಅಪರಾಧ ಹಾಗೂ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಾಹಿಸುತ್ತಿದ್ದ ವಿನಯ್ ಗಾವಂಕರ್ ಈ ತಿಂಗಳ 31ರಂದು ನಿವೃತ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಕಮೀಷನರೇಟ್ ಕಚೇರಿಯಲ್ಲಿ ಗಾವಂಕರ್ ಅವರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮೂಹ ಬೀಳ್ಕೊಟ್ಟ ಸನ್ನಿವೇಶ ಗಮನಸೆಳೆಯಿತು. ಆ ವೇಳೆ ಅಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಸಮೂಹ ಬಾವುಕರಾದರು. ಆದರೆ ಇಷ್ಟೂ ಸಮಯ ಪಿಎಸ್‌ಐ ಹುದ್ದೆಯಿಂದ ಎಸ್‌ಪಿ ಪದವಿವರೆಗೂ ಸೇವೆಸಲ್ಲಿಸಿ ನಿರ್ಗಮಿಸಿದ ಗಾವಂಕರ್ ಮುಖದಲ್ಲಿ ಮಾತ್ರ ಕರ್ತವ್ಯ ಪ್ರಜ್ಞೆ ಹಾಗೂ ಅದೇ ತೇಜಸ್ಸು ಪ್ರತಿಬಿಂಭಿಸುತ್ತಿತ್ತು.
ಪೊಲೀಸ್ ಇಲಾಖೆಯಲ್ಲಿ ಹೆಗ್ಗುರುತು.
ಈ ಸಂದರ್ಭದಲ್ಲಿ ವಿನಯ್ ಗಾವಂಕರ್ ಸೇವೆ ಬಗ್ಗೆ ಅಧಿಕಾರಿಗಳ ಪ್ರತಿಕ್ರಯೆ ಕೇಳಿದ ನಮ್ಮ ಜೊತೆ ಕೆಲವರು ಹಂಚಿಕೊಂಡ ಸೇವಾ ಅನುಭವದ ಮಾತುಗಳು ರೋಮಾಂಚಕಾರಿ ಕಥಾನಕಗಳನ್ನು ತೆರೆದುಟ್ಟಿತು. ಕರ್ತವ್ಯದ ವಿಚಾರದಲ್ಲಿ ಇವರೊಬ್ಬ ನಿಷ್ಟೂರ ವ್ಯಕ್ತಿ. ಅವರ ಜೊತೆಗಿನ ಕೆಲಸವು ಕರ್ತವ್ಯ ಎಂಬ ಪದಕ್ಕೆ ಸೀಮಿತವಾಗಿರದೆ, ಪ್ರತೀ ಕ್ಷಣವೂ ತರಬೇತಿ ಪಡೆಯುತ್ತಿದ್ದೇವೆಯೇನೋ ಎಂದೆನಿಸುತ್ತಿತ್ತಂತೆ.
ಒಬ್ಬೊಬ್ಬರು ಒಂದೊಂದು ಚರಿತ್ರೆಯ ಅಧ್ಯಾಯವನ್ನು ಹೇಳಿಕೊಳ್ಳುತ್ತಿದ್ದಾಗ ಅದನ್ನು ಕೇಳಿಕೊಳ್ಳುತ್ತಿದ್ದ ನಮಗೂ ಅದೇನೋ ಪುಳಕ. ಭೂಗತ ಪಾತಕಿಗಳ ಕಾರಸ್ಥಾನವೆನಿಸಿರುವ ಕರಾವಳಿಯಲ್ಲಿ ಆಗಾಗ್ಗೆ ಕೋಮುಗಲಭೆಗಳು ನಡೆಯುತ್ತಲೇ ಇವೆ. ದಶಕಗಳ ಹಿಂದೆ ಕಮಲ್ ಪಂತ್ ಅವರು ದಕ್ಷಿಣಕನ್ನಡ ಜಿಲ್ಲಾ ಎಸ್‌ಪಿಯಾಗಿದ್ದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸರೇ ಪಾತಕಿಗಳ ಟಾರ್ಗೆಟ್ ಆಗಿದ್ದರು. ರಾಜ್ಯದ ಯಾವುದೇ ಮೂಲೆಯಲ್ಲೂ ನದೆದಿರದ ಹಿಂಸಾಕಾಂಡ ಅದಾಗಿತ್ತು. ಅದಾಗಲೇ ಮಂಗಳೂರಿನ ಸೆರಗಿನಲ್ಲಿ ಪುಂಡರಿಂದ ದಾಳಿ ನಡೆದಾಗ ರಣರಂಗದಲ್ಲಿ ಪುಟಿದೇಳಿದ ವಿನಯ್ ಗಾವಂಕರ್ ತಂಡ ರಿವಾಲ್ವರ್, ಬಂದೂಕುಗಳಿಗೆ ಕೆಲಸ ಕೊಟ್ಟು ದಾಳಿಕೋರರನ್ನೇ ಸ್ಮಶಾನಕ್ಕೆ ಅಟ್ಟಿತ್ತು. ಆ ಘಟನೆಯ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಒಂದು ಕ್ಷಣ ಷೇಕ್ ಆಗಿದ್ದಾರಾದರೂ ವಿನಯ್ ಮಾತ್ರ ಫಿಲ್ಮೀ ಸ್ಟೈಲಲ್ಲೇ ಅಖಾಡದಲ್ಲಿದ್ದರಂತೆ.
ಒಂದೊಮ್ಮೆ ಒಂದು ಕಹಿ ಘಟನೆಯಲ್ಲಿ ಆರೆಸ್ಸೆಸ್ ನಾಯಕ ಡಾ.ಪ್ರಭಾಕರ್ ಭಟ್ ವಿರುದ್ಧ ನಡೆದ ಕಾರ್ಯಚರಣೆಯಲ್ಲಿ ವಿನಯ್ ಬಗ್ಗೆ ಕೇಸರಿ ಕಾರ್ಯಕರ್ತರು ಮುನಿಸಿಕೊಂಡರಾದರೂ, ಅನಂತರದ ದಿನಗಳಲ್ಲಿ ದಶಕದುದ್ದಕ್ಕೂ ಸಂಘ ಪರಿವಾರದ ಮುಖಂಡರೂ ಇವರ ಅಭಿಮಾನಿಗಳಾಗಿದ್ದುದು ವಿಶೇಷ.
ಮಂಗಳೂರು ಸುತ್ತಮುತ್ತ ನಡೆದ ಅವೆಷ್ಟೋ ಹಿಂಸಾಕಾಂಡಗಳ ಸಂದರ್ಭದಲ್ಲಿ ಪರಸ್ಥತಿ ನಿಯಂತ್ರಿಸಲು ಅಧಿಕಾರಿಗಳು ವಿನಯ್ ಅವರನ್ನೇ ಕರೆಸಿಕೊಳ್ಳುತ್ತಿದ್ದರು. ಕರಾವಳಿಯ ಪೊಲೀಸ್ ದಂಡನಾಯಕರಾಗಿದ್ದ ಸೀಮಂತ್ ಕುಮಾರ್, ಬಿ.ದಯಾನಂದ್, ಸೌಮೆಂದು ಮುಖರ್ಜಿ, ಕಮಲ್ ಪಂತ್, ಪ್ರಸಾದ್ ಸಹಿತ ಅನೇಕ ಅಧಿಕಾರಿಗಳು ‘ನಮ್ಮ ಜೊತೆ ವಿನಯ್ ಇದ್ದರೆ ಸಾಕು’ ಎಂಬ ವಿಶ್ವಾಸದಲ್ಲಿದ್ದರು. ಇದೀಗ ಜನಸ್ನೇಹೀ ಅಧಿಕಾರಿ ಎಂದೇ ಗುರುತಾಗಿರುವ ಮಂಗಳೂರು ಕಮೀಷನರ್ ಶಶಿ ಕುಮಾರ್ ಅವರ ಗರಡಿಯಲ್ಲೂ ಸಿಸಿಬಿ ಮುಖ್ಯಸ್ಥರಾಗಿ ಗಾವಂಕರ್ ಸ್ಥಾನದಲ್ಲಿದ್ದರು.
ಇದನ್ನೂ ಓದಿ.. ವಿನಯ್ ಗಾವಂಕರ್ ಬಗ್ಗೆ ಮುತ್ತಪ್ಪ ರೈ ಹೇಳಿದ ಕಥೆ..
ಹೇಳಿ ಕೇಳಿ ಕರಾವಳಿ ಜಿಲ್ಲೆಗಳು ಪಾತಕ ಲೋಕದ ಕಾರಸ್ಥಾನ. ಅಲ್ಲಿಂದಲೇ ಹಲವರು ಪಾತಕ ಕೃತ್ಯ ಆರಂಭಿಸಿ ಅಂತಾರಾಷ್ಟ್ರೀಯ ಭೂಗತ ಪಾತಕಿಗಳಾಗಿದ್ದಾರೆ. ಅವರ ಪೈಕಿ ಅನೇಕರನ್ನು ಖಾಕಿ ಖೆಡ್ಡಾಕ್ಕೆ ಬೀಳಿಸುವುದರಲ್ಲಿ ಇವರು ಯಶಸ್ಸಾಗಿದ್ದಾರೆ. ಅಷ್ಟೇ ಅಲ್ಲ, ಪಾತಕ ಸಾಮ್ರಾಜ್ಯದ ಯಾವುದೇ ಸನ್ನಿವೇಶಗಳ ಕುರಿತ ತನಿಖೆ ನಡೆಯುವುದಿದ್ದರೂ ವಿನಯ್ ಅವರ ಮಾಹಿತಿಯೇ ಬಹುತೇಕ ತನಿಖಾಧಿಕಾರಿಗಳಿಗೆ ಮಾರ್ಗದರ್ಶನವಾಗಿರುತ್ತಿತ್ತು.
ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಇವರಿಗೆ ಮಾತ್ರ..
ಒಂದೊಮ್ಮೆ ಭೂಗತಲೋಕವನ್ನು ಆಳುತ್ತಿದ್ದ ಮುತ್ತಪ್ಪ ರೈ ಯಾರಿಗೂ ತಲೆತಗ್ಗಿಸುತ್ತಿರಲಿಲ್ಲವಂತೆ. ಆದರೆ, ವಿದೇಶದಲ್ಲಿ ಬಂಧಿಯಾಗಿದ್ದ ರೈಯನ್ನು ಕೈಗೆ ಬೇಡಿ ಜಡಿದು ಭಾರತಕ್ಕೆ ಕರೆತಂದದ್ದು ವಿನಯ್ ಗಾವಂಕರ್ ಇದ್ದ ಖಾಕಿ ಟೀಂ. ಆ ಕಾರ್ಯಾಚರಣೆ ವೇಳೆ ವೇಳೆ ಪ್ರಾಣ ಭಿಕ್ಷೆಗಾಗಿ ರೈ ಇದೇ ವಿನಯ್ ಗಾವಂಕರ್ ಕಾಲಿಗೆ ಬಿದ್ದಿದ್ದರಂತೆ.
ಈ ಕುರಿತಂತೆ ಸ್ವತಃ ಮುತ್ತಪ್ಪ ರೈ ಅವರೇ ಉದಯ ನ್ಯೂಸ್ ಪ್ರತಿನಿಧಿ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ವರ್ಷಗಳ ಹಿಂದಿನ ಆ ಮಾತುಗಳು ಆಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತ್ತು.
ಇದನ್ನೂ ಓದಿ.. ವಿನಯ್ ಗಾವಂಕರ್ ಬಗ್ಗೆ ಮುತ್ತಪ್ಪ ರೈ ಹೇಳಿದ ಕಥೆ..
ಇವರು ಎಷ್ಟೇ ಖಡಕ್ ಇರಲಿ ಅಷ್ಟೇ ಸ್ನೇಹಜೀವಿಯೂ ಕೂಡಾ. ಹಾಗಾಗಿಯೇ ಮುತ್ತಪ್ಪ ರೈ ಅವರು ವಿನಯ್ ಮಾತನ್ನು ಒಪ್ಪಿಕೊಳ್ಳುತ್ತಿದ್ದರಂತೆ. ವಿನಯ್ ಹೇಳಿದ್ದ ಬುದ್ಧಿಮಾತನ್ನು ಮೀರಲಿಲ್ಲವಂತೆ.
ಇದೀಗ ವಿನಯ್ ಗಾವಂಕರ್ ಅವರು ಎಸ್‌ಪಿ ಹಂತದಲ್ಲಿ ಪೊಲೀಸ್ ಸೇವೆಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಅವರು ತನಿಖಾಧಿಕಾರಿಯಾಗಿರಲ್ಲ, ತನಿಖಾಧಿಕಾರಿಗಳಿಗೆ ಮಾರ್ಗದರ್ಶಿಯಾಗಿರುತ್ತಾರೆ ಎಂಬುದು ಹಲವರ ಭಾವುಕ ನುಡಿಗಳು.