ಬೆಂಗಳೂರು:ಕೊರೋನಾ ಸಂಕಟ ಕಾಲದಲ್ಲಿ ಪ್ರಾಣ ಪಣವಾಗಿಟ್ಟು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರ ಮರೆತಿದೆಯೇ? ಇಂಥದ್ದೊಂದು ಅನುಮಾನ ಆರೋಗ್ಯ ಕ್ಷೇತ್ರವನ್ನು ಕಾಡಿದೆ. ಹಲವಾರು ಬಾರಿ, ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರೂ ನಿರ್ಲಕ್ಷಿಸುತ್ತಾ ಬಂದಿರುವ ಸರ್ಕಾರ ಈ ಬಾರಿಯೂ ಅರ್ಥಿಕ ಪರಿಹಾರದ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲೂ ಆಶಾ ಕಾರ್ಯಕರ್ತೆಯರ ಬಗ್ಗೆ ಗಮನಹರಿಸಿಲ್ಲ.
ರಾಜ್ಯ ಸರ್ಕಾರದ ಈ ನಡೆ ಇದೀಗ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಇನ್ನೂ ಕೂಡಾ ಕಾಲ ಮಿಂಚಿಲ್ಲ. ಬಡಪಾಯಿ ಆಶಾಗಳಿಗೂ ಆರ್ಥಿಕ ಸಹಾಯಧನ ಘೋಷಿಸಿ ಎಂದು ಮನವಿ ಮಾಡಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ, ಡಿ.ನಾಗಲಕ್ಷ್ಮೀ, ಇಂದು ರಾಜ್ಯ ಸರ್ಕಾರದಿಂದ ಅಸಂಘಟಿತ ಕಾರ್ಮಿಕರು ಹಾಗೂ ವಿವಿಧ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕೋವಿಡ್ ಎರಡನೆಯ ಅಲೆಯ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳು ನಿರ್ವಹಣೆಗೆಂದು ವಿವಿಧ ಪರಿಹಾರಧನವನ್ನು ಎಂದು ಘೋಷಣೆ ಮಾಡಿರುವುದು ಉತ್ತಮ ನಡೆ. ಇದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸಂಪೂರ್ಣವಾಗಿ ಸ್ವಾಗತಿಸುತ್ತದೆ ಎಂದಿದ್ದಾರೆ.
ಅದೇ ರೀತಿ ಆರೋಗ್ಯ ಇಲಾಖೆಯಲ್ಲಿ ಅತ್ಯಂತ ಕೆಳಸ್ತರದಲ್ಲಿ ಇದ್ದು ಜನಸಾಮಾನ್ಯರೊಂದಿಗೆ ನೇರ ಸಂಪರ್ಕದಲ್ಲಿದ್ದು ಇಲಾಖೆಯ ಮತ್ತು ಜನಸಾಮಾನ್ಯರಿಗೆ ಕೊಂಡಿ ಎನಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು ಕಳೆದ ಕೋವಿಡ್ ಸಾಂಕ್ರಾಮಿಕ ಸಂದರ್ಭದಿಂದ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಸರ್ಕಾರ ಮರೆತಿದೆ ಎಂದು ದೂರಿದ್ದಾರೆ.
ಆರೋಗ್ಯ ಇಲಾಖೆ ವಹಿಸಿದ ಕೆಲಸವನ್ನು ಅತ್ಯಂತ ಕಾಳಜಿಯಿಂದ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು, ಸಮಾಜ ಗೌರವಿಸುವ ರೀತಿಯನ್ನು ನೋಡಿದರೆ ಈಗಾಗಲೇ ಅವರ ಸೇವೆಯ ಪ್ರಾಮುಖ್ಯತೆಯನ್ನು ಅರಿಯಬಹುದಾಗಿದೆ. ಈ ಸಂದರ್ಭದಲ್ಲಿ ಕಳೆದ ಎರಡು ತಿಂಗಳಿನಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಸೇರಿಸಿದರೆ ಮೂರು ತಿಂಗಳಿಂದ ಇವರಿಗೆ ರಾಜ್ಯ ಸರ್ಕಾರ ದಿಂದ ವೇತನ ಆಗಿರುವುದಿಲ್ಲ. ನಿಗದಿತ ವೇತನ ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೂ ಬಿಡುಗಡೆಯಾಗಿಲ್ಲ ಅದೇ ರೀತಿ ಇನ್ನೂ ಕೆಲವೆಡೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಕೂಡ ಕಳೆದ ಎರಡು ತಿಂಗಳಿಂದ ಬಿಡುಗಡೆಯಾಗಿಲ್ಲ. ಆದರೆ ಕಳೆದ 2 ತಿಂಗಳಿಂದ ಎಡೆಬಿಡದೆ ಆಶಾ ಕಾರ್ಯಕರ್ತರು ಎರಡನೇ ಅಲೆಯ ಸಂದರ್ಭದಲ್ಲಿ ನಿರಂತರ ಸೇವೆಯನ್ನು ಸಲ್ಲಿಸುತ್ತಿರುವ ಇವರಿಗೆ ಇಂದು ವಿಶೇಷ ಪರಿಹಾರ ಘೋಷಣೆ ಯಾಗಬಹುದೆಂದು ನಿರೀಕ್ಷೆ ಯಲ್ಲಿ ಇದ್ದರು. ನಿಜಕ್ಕೂ 42000 ಆಶಾಗಳಿಗೆ ನಿರಾಸೆಯಾಗಿದೆ ಎಂದು ನಾಗಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಸಿಕೆ ಹಾಕಿಸುವುದು, ಕೋವಿಡ್ ಸೋಂಕಿತ ವ್ಯಕ್ತಿಗಳ ಆರೋಗ್ಯ ಮಾಹಿತಿ, ಅದೇ ರೀತಿ ಪ್ರಥಮ, ದ್ವಿತೀಯ ಸಂಪರ್ಕವನ್ನು ಪತ್ತೆಹಚ್ಚುವುದು ವಿವಿಧ ರೀತಿಯ ಕೆಲಸವನ್ನು ಕಾರ್ಯಕರತೆಯರಿಂದ ಇಲಾಖೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳುತ್ತಿದೆ. ಈ ಹಂತದಲ್ಲಿ ಈ ಆರೋಗ್ಯ ಕಾರ್ಯಕರ್ತರು ಅತಿ ಕಡಿಮೆ ದುಡಿಮೆಯಲ್ಲಿ ಅಂದರೆ ಅತಿ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವದ ಹಂಗು ತೊರೆದು ಈ ಕೆಲಸ ಮಾಡುತ್ತಿರುವವರಿಗೆ ಪ್ರೋತ್ಸಾಹಧನವನ್ನು ಘೋಷಣೆ ಮಾಡಿರುವುದು ಅತ್ಯಂತ ವಿಷಾದನೀಯ ವಿಷಯವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
ಕೂಡಲೇ ಇವರಿಗೆ ವಿಶೇಷ ಪ್ರೋತ್ಸಾಹ ಧನ ನೀಡಬೇಕಾಗಿದೆ. ಈಗಾಗಲೇ ಈ ಬಗ್ಗೆ ಇವರ ಕಾರ್ಯದ ಬಗ್ಗೆ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ, ಆರೋಗ್ಯ ಮಂತ್ರಿಗಳಿಗೆ, ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಎರಡು ಬಾರಿ ನೀಡಲಾಗಿದೆ. ಪ್ರಮುಖ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಪ್ರೋತ್ಸಾಹ ಧನ ಘೋಷಣೆ ಮಾಡಿದ ಇರುವುದು ಅತ್ಯಂತ ವಿಷಾದದ ಸಂಗತಿ. ಈ ಹಂತದಲ್ಲಿ ಇವರ ಸೇವೆಯನ್ನು ಗೌರವಿಸಿ ಇವರಿಗೂ ಸಹ ಕೂಡಲೇ ಪರಿಹಾರವನ್ನು ಘೋಷಣೆ ಮಾಡಬೇಕಾಗಿದೆ ಇವರ ಒಂದು ಸೇವೆಯನ್ನು ಗೌರವಿಸಬೇಕಾಗಿದೆ.ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾಗಿ ಅವರ ವೇತನ ನಿಗದಿತ ಸಮಯಕ್ಕೆ ನೀಡುವ ಜೊತೆಗೆ ವಿಶೇಷ ಪ್ರೋತ್ಸಾಹ ಧನ ಒಂದು ಮಾಸಿಕ 10 ಸಾವಿರ ನೀಡಬೇಕಾದ್ದು ಕೂಡಲೇ ಜಾರಿ ಮಾಡಬೇಕು ಅನ್ನೋದು ಈ ಸಂದರ್ಭದಲ್ಲಿ ಸಂಘದಿಂದ ಒತ್ತಾಯಿಸುತ್ತೇವೆ ಎಂದು ಅವರು ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.