ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದೆಯೇ? ಈ ಬಾರಿ ನಡೆದ 10 ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲುಂಡಿದೆ. ಕೇವಲ ಒಂದು ಕಡೆ ಬಹುಮತದ ತೃಪ್ತಿಪಟ್ಟುಕೊಳ್ಳುವ ಸಾಧನೆ ಬಿಜೆಪಿಯದ್ದಾಗಿದೆ.
ಅದರಲ್ಲೂ ಬಿಜೆಪಿ ಭದ್ರಕೋಟೆ ಎನಿಸಿದ್ದ ರೆಡ್ಡಿಗಳ ಅಡ್ಡೆ ಬಳ್ಳಾರಿಯಲ್ಲಿ ಕಮಲ ಪಕ್ಷ ಭಾರೀ ಮುಖಭಂಗ ಅನುಭವಿಸಿದೆ. ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೂ ಬಿಜೆಪಿಗೆ ಮುಖಭಂಗವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲಿನ ರುಚಿಯುನಿಸಿದ್ದಾರೆ. ಭದ್ರಾವತಿ ನಗರಸಭೆಯ 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದ್ದರೆ, 4 ಸ್ಥಾನಗಳನ್ನಷ್ಟೇ ಪಡೆದ ಬಿಜೆಪಿ ಅಲ್ಲಿನ ಅಧಿಕಾರವನ್ನು ಕೈ ನಾಯಕರಿಗೆ ಬಿಟ್ಟುಕೊಟ್ಟಿದ್ದಾರೆ.
ತೀರ್ಥಹಳ್ಳಿಯಲ್ಲೂ ಅದೇ ಸನ್ನಿವೇಶ. ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ 15 ಸ್ಥಾನಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿ ಬಿಜೆಪಿ 6 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿದೆ.
ಅತ್ತ, ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಅಲ್ಲಿ ಬಿಜೆಪಿ 13 ಸ್ಥಾನಗಳನ್ನಷ್ಟೇ ಗೆದ್ದು ಕೈ ಮುಂದೆ ಮಂಡಿಯೂರಿದೆ.
ಇನ್ನೊಂದೆಡೆ, ಯಡಿಯೂರಪ್ಪ ಅವರ ಆಪ್ತ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಚಿವ ಯೋಗೇಶ್ವರ್, ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಸೈನ್ಯದ ಸಮರ ಸಜ್ಜಿನ ಪ್ರಚಾರದ ನಡುವೆಯೂ ರಾಮನಗರದಲ್ಲಿ ಬಿಜೆಪಿ ಹೀನಾಯ ಸೋಲುಂಡಿದೆ. ರಾಮನಗರ ನಗರಸಭೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದ್ದು, ಅಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಮನಗರ ನಗರಸಭೆಯ ಒಟ್ಟು 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್ 11 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.