ಬೀದರ್ : ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ತಡೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟುವ ಮೂಲಕ ಜನರ ಜೀವ, ಜೀವನವನ್ನು ಉಳಿಸಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ನಡೆದ ‘ಬೀದರ್ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನ ಮುಂಜಾಗ್ರತಾ ಸಭೆ’ಯಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದೆ. ಅದರಲ್ಲೂ ನಮ್ಮ ರಾಷ್ಟ್ರ, ರಾಜ್ಯದಲ್ಲಿ ಕೂಡ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನ ಜೀವನ ಕಷ್ಟಕರವಾಗುತ್ತಿದ್ದು, ಸರ್ಕಾರ ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಬೀದರ್ ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಕಾಗುವಷ್ಟು ಬೆಡ್ ಗಳು, ಆಕ್ಸಿಜನ್, ವೆಂಟಿಲೇಟರ್ ಗಳು ಸಿಗುತ್ತಿಲ್ಲ ಎಂಬ ಕೂಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈರಸ್ ಹರಡುವಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಸರ್ಕಾರ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವೈರಸ್ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಾಧ್ಯವಾಗುವ ಎಲ್ಲಾ ಇಲಾಖೆಗಳನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಉಂಟಾಗುವ ಸಂಭವ ಹೆಚ್ಚಾಗಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು, ಸೂಕ್ತವೆನಿಸುವ ಖಾಸಗಿ ಹೋಟೆಲ್, ಶಾಲಾ ಕಾಲೇಜು ಕಟ್ಟಡಗಳು, ಭವನಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು. ರೆಮ್ಡಿಸಿವರ್ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ವ್ಯಾಕ್ಸಿನೇಷನ್ ಕಾರ್ಯವನ್ನು ಹೆಚ್ಚಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.





















































