ಬೆಂಗಳೂರು: 2020 -2021 ರ ಸಾಲಿನ ಬಿಬಿಎಂಪಿ ಮಂಡಿಸಿರುವ ಬಜೆಟ್ ನಲ್ಲಿ ತನ್ನ ಆದಾಯ ವೃದ್ಧಿಗೆ ಯಾವುದೇ ಯೋಜನೆಗಳಿಲ್ಲದೆ ನಿರರ್ಥಕ ಬಜೆಟ್ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಬಣ್ಣಿಸಿದ್ದಾರೆ
ಸಾರ್ವಜನಿಕರ ಅನುಕೂಲ ದೃಷ್ಟಿಯಲ್ಲಿ ಎ ಖಾತೆಗಳನ್ನು ಹಂಚುತ್ತೇವೆ ಎಂದು ಯಾವುದೇ ಮಾರ್ಗಸೂಚಿಗಳಿಲ್ಲದೆ ಘೋಷಿಸಿರುವುದು ಕೇವಲ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತನ್ನ ಪರಮ ಭ್ರಷ್ಟಾಚಾರದಿಂದ ಪ್ರತಿವರ್ಷ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಸಾಕಷ್ಟು ಲೋಪಗಳು ಇದ್ದು ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ ಹಾಗೂ ಅವರಿಂದ 1ರೂಪಾಯಿಯ ವಸೂಲಿಯೂ ಸಹ ಆಗಿಲ್ಲ. ಈ ಕರ್ಮಕಾಂಡ ಗಳಿಗೆಲ್ಲಾ ಅಧಿಕೃತ. ಹಾಕುವಂತೆ ತನ್ನದೇ ಆದ ಆಂತರಿಕ ಲೆಕ್ಕಪರಿಶೋಧನಾ ವಿಭಾಗವನ್ನು ಘೋಷಿಸಿರುವುದು ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ಕೊಡುವ ಉದ್ದೇಶವಾಗಿದೆ ಎಂದವರು ಹೇಳಿದ್ದಾರೆ.
ಜಾಹೀರಾತು ,ಮಾರುಕಟ್ಟೆ ಕಟ್ಟಡಗಳ ಬಾಡಿಗೆ ವಸೂಲಿಯಲ್ಲಿ ತನ್ನ ಆದಾಯವನ್ನು ವೃದ್ಧಿಸಿಕೊಳ್ಳುವ ದಿಶೆಯಲ್ಲಿ ಯಾವುದೇ ಕ್ರಿಯಾತ್ಮಕ -ದಿಟ್ಟ ಯೋಜನೆಗಳು ಕಾಣಸಿಗುವುದಿಲ್ಲ.ಕೇವಲ ಪುಡಿಗಾಸು 38 ಕೋಟಿ ₹ಗಳಿಗಷ್ಟೇ ಸಮಾಧಾನ ಪಟ್ಟುಕೊಂಡಿದೆ. ಈಗಾಗಲೇ ಬಿಬಿಎಂಪಿಯು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ನಲ್ಲಿ ಬಿಬಿಎಂಪಿಯ ಪರಮ ಭ್ರಷ್ಟಾಚಾರದಿಂದ ದೇಶದಲ್ಲಿಯೇ ಅತ್ಯಂತ ಕಡೆಯ ಸ್ಥಾನದಲ್ಲಿದೆ. ತಂತ್ರಾಂಶಗಳ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ.ಇವುಗಳ ಸುಧಾರಣೆಯಲ್ಲಿ ಐಟಿ ಸಿಟಿ ಎಂದೇ ಖ್ಯಾತರಾಗಿರುವ ಬೆಂಗಳೂರಿಗರಿಗೆ ಯಾವುದೇ ತತ್ರಾಂಶಗಳ ಅನುಕೂಲ ಮಾಡಿಕೊಡುವಂತಹ ಯೋಜನೆಗಳು ಲಭ್ಯವಿಲ್ಲದಿರುವುದು ಈ ಬಜೆಟ್ ನಲ್ಲಿ ಕಂಡುಬರುತ್ತದೆ ಎಂದು ಆಪ್ ನಾಯಕ ವಿಶ್ಲೇಷಣೆ ಮಾಡಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರವು ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಂಪೆನಿಯನ್ನು ಮಾಡಿಕೊಂಡಿದೆ. ಆದರೆ ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೆ ಬಿಬಿಎಂಪಿಯು 1622 ಕೋಟಿಗಳನ್ನು ತನ್ನ ಆಯವ್ಯಯದಲ್ಲಿ ಒದಗಿಸಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.ಇಷ್ಟೊಂದು ಬೃಹತ್ ಹಣವನ್ನು ಎಲ್ಲಿಂದ ಹೊಂದಿಸುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನ ಸ್ಪಷ್ಟವಾಗಿ ಕಂಡುಬರುತ್ತದೆ. ಪಾಲಿಕೆಯ ಶಾಲಾ ಕಾಲೇಜುಗಳಿಗೆ ಕಟ್ಟಡಗಳ ಮೂಲಭೂತ ಸೌಕರ್ಯ ಒದಗಿಸುವಿಕೆಯಲ್ಲಿ ಹಾಗೂ ಶಿಕ್ಷಣ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಯಾವುದೇ ವಿನೂತನ ಯೋಜನೆಗಳಿಲ್ಲದೆ ಖಾಸಗಿ ಶಾಲೆಗಳ ದಂಧೆಗೆ ನೇರವಾಗಿ ಪ್ರೋತ್ಸಾಹಿಸುವ ಹೀನಾತಿಹೀನ ಬಜೆಟ್ ಇದಾಗಿದೆ ಎಂದು ಅಧ್ಯಕ್ಷ ಮೋಹನ್ ದಾಸರಿ ಬಣ್ಣಿಸಿದ್ದಾರೆ
ಇದೇ ರೀತಿ ಆರೋಗ್ಯ ಕ್ಷೇತ್ರದಲ್ಲಿಯೂ ಸಹ ಈ ಬಜೆಟ್ ಸಂಪೂರ್ಣ ವೈಫಲ್ಯಗೊಂಡಿದೆ. ಬಿಬಿಎಂಪಿ ರೆಫರಲ್ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಹಾಗೂ ಸುಧಾರಣೆಗೆ ಯಾವುದೇ ಯೋಜನೆಗಳಿಲ್ಲದೆ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಿರು ವಂತಿದೆ. ಉದ್ಯಾನಗಳ ,ಪಾದಚಾರಿ ಮಾರ್ಗಗಳ ನಿರ್ವಹಣೆಗಾಗಿ ಘೋಷಿಸಿರುವ ಯೋಜನೆಗಳು ಸಂಪೂರ್ಣವಾಗಿ ಸ್ಥಳೀಯ ಶಾಸಕರುಗಳ ಹಿಂಬಾಲಕರಿಗೆ ಅನುಕೂಲ ಮಾಡುವ ರೀತಿಯಲ್ಲಿ ಇದೆ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಹೊಸ ಕಾಮಗಾರಿಗಳಿಗೆ ಯಾವುದೇ ಪ್ರಸ್ತಾವನೆ ಇಲ್ಲ.ಈ ಮೂಲಕ ಬಿಬಿಎಂಪಿಯು ತನ್ನ ಆದಾಯ ವೃದ್ಧಿಗೆ ಯಾವುದೇ ದಿಟ್ಟ ಕ್ರಮಗಳನ್ನು ಘೋಷಿಸದೆ ಕೇವಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನಗಳಿಗಾಗಿ ಭಿಕ್ಷೆ ಬೇಡುವಂತಹ ಬಜೆಟ್ ಇದಾಗಿದೆ ಎಂದು ಮೋಹನ್ ದಾಸರಿ ಆರೋಪಿಸಿದ್ದಾರೆ .