ಬೆಂಗಳೂರು: ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ನ ರಣವೀಳ್ಯ ಕೂಡಾ ರಂಗು ತಂದಿದೆ. ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ.
ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಸುರೇಶ್ ಅಂಗಡಿಯವರ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮಂಗಳಾ ಅಂಗಡಿ ಕಣಕ್ಕಿಳಿದರೆ, ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಸತೀಶ್ ಜಾರಕಿಹೊಳಿಯವರಿಗೆ ಟಿಕೆಟ್ ನೀಡಿದೆ.
ಬಿಜೆಪಿಯು ಅನುಕಂಪದ ಅಲೆಯ ವರದಾನದ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರ ಸಿಡಿ ವಿವಾದವನ್ನು ಅಸ್ತ್ರವಾಗಿಟ್ಟು ಸೆಣಸಾಡಲು ರಣವ್ಯೂಹ ರೂಪಿಸಿದೆ. ಹಾಗಾಗಿ ಅಂಗಡಿ ಉತ್ತರಾಧಿಕಾರಿ ಹಾಗೂ ಜಾರಕಿಹೊಳಿ ಪರಿವಾರ ನಡುವಿನ ಸ್ಪರ್ದೆ ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರಬಿಂದುವಾಗಿದೆ.