ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ.
ಪ್ರತೀ ವರ್ಷ ಮಾರ್ಚ್ 14ರ ತಡ ರಾತ್ರಿ ದಕ್ಷಿಣಕನ್ನಡದ ಪೊಳಲಿ ಕ್ಷೇತ್ರದಲ್ಲಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುವುದು. ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತಿರುವುದೇ ವಿಶೇಷ.
ಈ ಬಾರಿ ಪೂರ್ತಿ ಒಂದು ತಿಂಗಳ ಕಾಲ ಪೊಳಲಿ ಜಾತ್ರಾ ವೈಭವ ನೆರವೇರಲಿದೆ ಎಂದು ಇಂದು ಬೆಳಿಗ್ಗೆ ಘೋಷಿಸಲಾಗಿದೆ.
ಒಂದು ತಿಂಗಳ ಕಾಲದ ಜಾತ್ರೆ ಸಂದರ್ಭದಲ್ಲಿ ಪ್ರತೀ ಐದು ದಿನಗಳಿಗೊಮ್ಮೆ ದಂಡಮಾಲೋತ್ಸವ ಗಮನಸೆಳೆಯಲಿದ್ದು, ಏಪ್ರಿಲ್ 6ರಂದು ಮೊದಲ ದಿನದ ಚೆಂಡಾಟ ಮಹೋತ್ಸವ ನೆರವೇರಲಿದೆ. ಐದು ದಿನಗಳ ಚೆಂಡಾಟ ಮಹೋತ್ಸವವು ಆಸ್ತಿಕ ಸಮೂಹದ ‘ಭಕ್ತಿ-ಶಕ್ತಿಯ ಕಾಳಗ’ಕ್ಕೆ ಸಾಕ್ಷಿಯಾಗಲಿದೆ. ಏಪ್ರಿಲ್ 10ರಂದು ‘ಕಡೇ ಚೆಂಡು’. ಮರುದಿನ ಅಂದರೆ ಏಪ್ರಿಲ್ 11ರಂದು ‘ಮಹಾರಥೋತ್ಸವ’ ಕೈಂಕರ್ಯ ಮೂಲಕ ಅದ್ದೂರಿ ವೈಭವದ ಸನ್ನಿವೇಶಕ್ಕೆ ಈ ಜಾತ್ರೆ ಸಾಕ್ಷಿಯಾಗಲಿದೆ. ಏಪ್ರಿಲ್ 12ರಂದು ಆರಾಟ ಮಹೋತ್ಸವ ಸಂದರ್ಭದಲ್ಲಿ ಧ್ವಜಸ್ಥಂಭದಿಂಧ ಗರುಡಧ್ವಜವನ್ನು ಇಳಿಸಿದ ನಂತರ ತಿಂಗಳ ಕಾಲದ ರಾಜರಾಜೇಶ್ವರಿ ಜಾತ್ರೆಗೆ ತೆರೆ ಬೀಳಲಿದೆ. ಆದರೂ ಜಾತ್ರೆಯ ಸಡಗರ ಮರುದಿನವೂ ಮುಂದುವರಿಯುತ್ತದೆ. ಆರಾಟ ಮಹೋತ್ಸವದ ಮರುದಿನ ದೇವಾಲಯದ ದೈವ ದೇವರಿಗೆ ಸಲ್ಲುವ ನೇಮೋತ್ಸವ ಕೂಡಾ ಪೊಳಲಿ ಕ್ಷೇತ್ರದ್ಧೇ ಆದ ವೈಶಿಷ್ಟ್ಯ.
ಏನಿದು ಪೊಳಲಿ ಚೆಂಡು?
ದುರ್ಗಾ ದೇವತೆಗಳ ನಾಡು ಎಂದೇ ಜನಜನಿತವಾಗಿರುವ ರಾಜ್ಯ ಕರಾವಳಿಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ನವದುರ್ಗೆಯರ ಪೈಕಿ ಹಿರಿಯವಳೇ ಪೊಳಲಿ ರಾಜರಾಜೇಶ್ವರಿ.

ಪುರಾಣ ಕಥೆಗಳಲ್ಲಿ ಉಲ್ಲೇಖವಿರುವಂತೆ ನಾಡಿಗೆ ಕಂಟಕವಾಗಿ ಪರಿಗಣಿಸಿದ್ದ ರಾಕ್ಷಸರನ್ನು ಈ ದೇವಿ ಯುದ್ಧದಲ್ಲಿ ಸೋಲಿಸಿ, ಅವರ ರುಂಡವನ್ನು ಚೆಂಡಾಡಿದ್ದಾಳೆ ಎನ್ನಲಾಗಿದೆ. ಯುದ್ಧ ಗೆದ್ದ ಸಂದರ್ಭದಲ್ಲಿ ರಾಕ್ಷಸರ ರುಂಡ ಚೆಂಡಾಟದ ಮೂಲಕ ಶ್ರೀ ದೇವಿ ಅಪೂರ್ವ ಖುಷಿ ಪಟ್ಟಲೆಂಬುದೂ ಪ್ರತೀತಿ.
ಪುರಾಣದ ಪ್ರಸಂಗದಂತೆ ದೇವಿಯನ್ನು ಸಂತುಷ್ಟಗೊಳಿಸಲು ಭಕ್ತ ಸಮೂಹ ಜಾತ್ರೆಯ ಅಂತಿಮ ದಿನಗಳಲ್ಲಿ ಚೆಂಡಾಟ ಮೂಲಕ ಭಕ್ತಿ-ಶಕ್ತಿಯ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಟಿಪ್ಪು ಆಡಳಿತ ಸಂದರ್ಭದ ಸನ್ನಿವೃಶ, ಅಬ್ಬಕ್ಕ ರಾಣಿಯ ಕಾಲಾವಧಿಯ ಕುರುಹುಗಳು ಈ ಚೆಂಡು ಉತ್ಸವದ ಮಹಿಮೆಯ ಒಂದು ಭಾಗವಾಗಿ ಈಗಲೂ ಸ್ಮರಣೀಯವಾಗಿದೆ. ಜಾತಿ-ಧರ್ಮ-ಸೀಮೆ ಎಂಬ ಭೇದವಿಲ್ಲದೆ ಮನುಕುಲ ಈ ಉತ್ಸವದಲ್ಲಿ ಭಾಗವಹಿಸುತ್ತದೆ.
ಕಳೆದ ವರ್ಷ ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ವೈಭವವಿಲ್ಲದೆ ಕೇವಲ ದೇವಾಲಯದ ಸಿಬ್ಬಂದಿಯಷ್ಟೇ ಈ ಉತ್ಸವವನ್ನು ಸರಳವಾಗಿ ಆಚರಿಸಿ ಸಂಪ್ರದಾಯಕ್ಕಷ್ಟೇ ಸೀಮಿತಗೊಳಿಸಲಾಗಿತ್ತು. ಈ ಬಾರಿ ಕೂಡಾ ಕೊರೋನಾ ಆತಂಕದ ನಡುವೆ ಎಚ್ಚರಿಕೆಯಿಂದ ದೇವಿಯ ಸೇವೆ ನೆರವೇರಲಿದೆ.