ಸಿಡಿ ಪುರಾಣಕ್ಕೆ ಹಠಾತ್ ತಿರುವು.. ಕೊನೆಗೂ ದೂರು ನೀಡಿದ ಜಾರಕಿಹೊಳಿ.. ಅದೇ ಹೊತ್ತಿಗೆ ಯುವತಿಯ ವೀಡಿಯೋ ಹೇಳಿಕೆಯ ಬಿರುಗಾಳಿ..
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ, ಕಮಲ ಪಾಳಯದಲ್ಲೂ ತಳಮಳ ಸೃಷ್ಟಿಸಿರುವ ಸಿಡಿ ವಿವಾದ ಇದೀಗ ಹಠಾತ್ ಬೆಳವಣಿಗೆಗೆ ಸಾಕ್ಷಿಯಾಯಿತು.
ವಿವಾದಿತ ಸಿಡಿಯಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಹಸ್ಯ ತಂತ್ರಗಾರಿಕೆಯಲ್ಲಿ ತೊಡಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣ ಕುರಿತು ವಿಶೇಷ ತನಿಖಾ ತಂಡ ಒಂದೆಡೆ ತನಿಖೆ ಆರಂಭಿಸಿರುವಂತೆಯೇ, ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಈ ಸುದ್ದಿಯು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದಾಗುತ್ತಿದ್ದಂತೆಯೇ ಮತ್ತೊಂದೆಡೆ, ಯುವತಿಯೊಬ್ಬರು ತನಗಾಗಿರುವ ಅನ್ಯಾಯ ಹಾಗೂ ತನ್ನ ಅಸಹಾಯಕತೆಯನ್ನು ಹೇಳಿಕೊಂಡ ವೀಡಿಯೋ ತುಣುಕೊಂದು ಬಿಡುಗಡೆಯಾಗಿ ಅದು ಕೂಡಾ ಸುದ್ದಿಯ ಕೇಂದ್ರಬಿಂದುವಾಯಿತು.
ಆ ಯುವತಿ ರಕ್ಷಣೆಗಾಗಿ ಗೃಹಸಚಿವರಲ್ಲಿ ಮೊರೆಯಿಟ್ಟಿದ್ದಾರೆ. ಇದೀಗ ಆ ಯುವತಿ ಯಾರು? ಪೊಲೀಸರ ಮುಂದೆ ಬಂದು ಪ್ರತ್ಯೇಕವಾಗಿ ಹೇಳಿಕೆ ನೀಡಲು ಆ ಯುವತಿಗೆ ಸಾಧ್ಯವಾಗಿಲ್ಲವೇ? ಎಂಬ ಚರ್ಚೆಗಳಿಗೆ ಆ ವೀಡಿಯೋ ಎಡೆಮಾಡಿಕೊಟ್ಟಿದೆ.