ಮಂಗಳೂರು: ಪುರಾಣ ಪ್ರಸಿದ್ಧ ಸುಬ್ರಮಣ್ಯ ದೇವಸ್ಥಾನದಲ್ಲಿ ಈಗ ಕೈಂಕರ್ಯ ವಿಚಾರದಲ್ಲಿ ವಿವಾದ ಉಂಟಾಗಿದೆ. ಈ ಕ್ಷೇತ್ರದಲ್ಲಿ ಪ್ರಸಕ್ತ ಶಿವರಾತ್ರಿ ಸಂದರ್ಭದಲ್ಲಿನ ಪೂಜೆ ಕೂಡಾ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದಲೂ ಶಿವರಾತ್ರಿಯನ್ನು ಅತ್ಯಂತ ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಆದರೆ ಇದೀಗ ಮುಜರಾಯಿ ಇಲಾಖೆಯ ಅಧಿಕಾರಿಗಳೇ ಹೊಸ ಪರಂಪರೆಗೆ ಮುನ್ನುಡಿ ಬರೆದು ಈ ದೇವಸ್ಥಾನದ ವಿವಾದವನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ದಂತಿದೆ.
ಈ ಕುರಿತಂತೆ ಸುಬ್ರಮಣ್ಯ ಮಠದ ಹಿರಿಯ ಯತಿ ವಿದ್ಯಾಪ್ರಸನ್ನ ತೀರ್ಥರು ಅಸಮಾಧಾನ ಹೊರಹಾಕಿದ್ದು, ದೇಗುಲ ಮತ್ತು ಮಠದ ನಡುವೆ ಬಿಕ್ಕಟ್ಟು ತಂದು ವಿವಾದ ಸೃಷ್ಟಿಸಲು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇಡೀ ಹಿಂದೂ ಸಮಾಜವನ್ನು ವೈಷ್ಣವ ಮತ್ತು ಶೈವ ಹೆಸರುಗಳಲ್ಲಿ ಇಬ್ಭಾಗ ಮಾಡಲು ತಂತ್ರ ನಡೆದಿದೆ ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವಿವಾದಕ್ಕೆ ಮುಜರಾಯಿ ಇಲಾಖೆಗಳು ಅವಕಾಶ ನೀಡಬಾರದು ಹಿಂದೂ ಸಮಾಜದ ಬಂಧುಗಳೂ ಈ ಬಗ್ಗೆ ಎಚ್ಚರವಹಿಸಬೇಕಿದೆ ಎಂದು ಶ್ರೀಗಳು ಕರೆಕೊಟ್ಟಿದ್ದಾರೆ.